ಶಿಕ್ಷಕರ ವರ್ಗಾವಣೆ ಪ್ರಾರಂಭಿಸಲು ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ!
ಬೆಂಗಳೂರು(ಜೂ.03): ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಜೂ.6ರಿಂದ ಜು.31ರೊಳಗೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಶಿಕ್ಷಣ ಇಲಾಖೆಯು ಶುಕ್ರವಾರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ. ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಶಿಕ್ಷಕರ ವರ್ಗಾವಣೆ ಪುನಾರಂಭಿಸಲು ಸರ್ಕಾರ ಅನುಮತಿಸಿದೆ. ಅದರಂತೆ ವರ್ಗಾವಣೆ ಪ್ರಕ್ರಿಯೆಗೆ ವೇಳಾಪಟ್ಟಿ ಬದಲಾಯಿಸಲಾಗಿದೆ. ಉಳಿದಂತೆ 2022ರ ಡಿ.26ರಂದು ಹೊರಡಿಸಲಾದ ವೇಳಾಪಟ್ಟಿ ಪ್ರಕಾರ ಉಳಿದೆಲ್ಲಾ ಮಾರ್ಗಸೂಚಿ ಅಂಶಗಳು ಯಥಾವತ್ತಾಗಿ ಮುಂದುವರೆಯಲಿವೆ ಎಂದು ತಿಳಿಸಲಾಗಿದೆ.
ಮೊದಲಿಗೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದ್ದು, ಜೂ.6ರಂದು ಕರಡು ಪ್ರತಿ ಪ್ರಕಟಿಸಲಾಗುವುದು. ಆನಂತರ ಆಕ್ಷೇಪಣೆಗೆ ಜೂ.10ರವರೆಗೆ ಅವಕಾಶವಿರುತ್ತದೆ. ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಜೂ.17ರಿಂದ ಕೌನ್ಸೆಲಿಂಗ್ ಆರಂಭವಾಗಲಿದೆ. ಹೆಚ್ಚುವರಿ ಶಿಕ್ಷಕರ ಮರು ಹಂಚಿಕೆ ಕೌನ್ಸೆಲಿಂಗ್ ಬ್ಲಾಕ್ ಹಂತದಲ್ಲಿ ಜೂ.20ರಂದು ನಡೆಯಲಿದೆ. ತಾಂತ್ರಿಕ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಜೂ.8ರಿಂದ 26ರವರೆಗೆ ನಡೆಯಲಿದೆ. ಸಾಮಾನ್ಯ ಕೋರಿಗೆ ವರ್ಗಾವಣೆ ಜೂ.7ರಿಂದ ಜು.7ರವರೆಗೆ ನಡೆಯಲಿದೆ. ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್ ಜು.10ರಿಂದ 17ವರೆಗೆ ನಡೆಯಲಿದೆ. ವಿಭಾಗೀಯ ಹಂತದ ವರ್ಗಾವಣೆ(ಒಳಗೆ) ಜು.17ರಿಂದ 26ರವರೆಗೆ ನಡೆಯಲಿದೆ. ವಿಭಾಗೀಯ ಹಂತದ ವರ್ಗಾವಣೆ(ಹೊರಗೆ) ಜು.25ರಿಂದ ಜು.31ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಪ್ರಕಟಿತ ಹೆಚ್ಚುವರಿ ಶಿಕ್ಷಕರ ಆದ್ಯತೆ ಸಲ್ಲಿಸುವಾಗ ವಿನಾಯಿತಿ, ಆದ್ಯತೆ ಕೋರಿ ಸಲ್ಲಿಸುವ ದಾಖಲೆಗಳನ್ನು ಮತ್ತು ಇತರ ಸೇವಾ ಮಾಹಿತಿಯನ್ನು ಅಪ್‌ಲೋಡ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ತಪ್ಪಾಗಿ ಅರ್ಜಿ ಸಲ್ಲಿಕೆ, ಸರಿಯಾದ ದಾಖಲೆಗಳನ್ನು ಅಪ್‌ಲೋಡ್ ಮಾಡದೆ ಇರುವುದು ಕಂಡು ಬಂದರೆ ಪರಿಷ್ಕರಣೆಗೆ ಅವಕಾಶ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ(ಪ್ರಭಾರ) ಬಿ.ಬಿ.ಕಾವೇರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಶಿಕ್ಷಣ ಇಲಾಖೆಯ ವೆಬ್‌ಸೈಟ್ www.schooleducation.kar.nic.in ನೋಡಬಹದು.
ಶಿಕ್ಷಕರ ವರ್ಗಾವಣೆಗೆ ಕಳೆದ ಜನವರಿಯಲ್ಲೇ ಅಧಿಸೂಚನೆ ಸಹಿತ ವೇಳಾಪಟ್ಟಿಪ್ರಕಟಿಸಲಾಗಿತ್ತು. ಸುಮಾರು 75 ಸಾವಿರಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿಯನ್ನೂ ಸಲ್ಲಿಸಿದ್ದರು. ಸುಮಾರು 25 ಸಾವಿರ ಶಿಕ್ಷಕರಿಗೆ ವರ್ಗಾವಣೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.