ಅತ್ತೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಂದ ಸೊಸೆ
ನಾಗ್ಪುರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿರುವ ತಮ್ಮ ಮನೆಯಲ್ಲಿ 80 ವರ್ಷದ ಅತ್ತೆಯ ಮೇಲೆ ಹಲ್ಲೆ ನಡೆಸಿ, ಕತ್ತು ಸೀಳಿ ಅವರನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಈ ಭಯಾನಕ ಕೊಲೆ (Murder News) ನಡೆದಿದ್ದು, ಹತ್ಯೆಗೆ ಸಂಬಂಧಿಸಿದಂತೆ ಗುಡಧೆ ಲೇಔಟ್ ನಿವಾಸಿ 36 ವರ್ಷದ ಪೂನಂ ಆನಂದ ಶಿಖರವಾರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆ ಮಾಡಿರುವ ಪೂನಮ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಅದಕ್ಕಾಗಿಯೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಳು. ಆದರೆ ಆಕೆ ಕಳೆದ ಕೆಲವು ವಾರಗಳಿಂದ ಔಷಧಿ ಸೇವಿಸುವುದನ್ನು ನಿಲ್ಲಿಸಿ, ತನ್ನ ಕುಟುಂಬದ ಸದಸ್ಯರೊಂದಿಗೆ ಜಗಳವಾಡುತ್ತಿದ್ದಳು. ಜಗಳವಾಡುವಾಗ ಕೋಪದ ಭರದಲ್ಲಿ ಆಕೆ ತನ್ನ ಅತ್ತೆ ತಾರಾದೇವಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕತ್ತು ಸೀಳಿದ್ದಾಳೆ. ಹಲವು ಬಾರಿ ಅತ್ತೆಗೆ ಇರಿದು ಕೊಲೆ ಮಾಡಿದ್ದಾಳೆ.
ಗಲಾಟೆ ಕೇಳಿ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ!
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (ಸಿಆರ್‌ಪಿಎಫ್) ಯೋಧ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಿಹಾರದ ನಿವಾಸಿಯಾದ ಬಶಿತ್ ನಾರಾಯಣ ಯಾದವ್ ಅವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನಿಹಾಲ್-ಖಾಜಿಗುಂಡ್ ಸುರಂಗದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶನಿವಾರ ರಾತ್ರಿ 11.45ರ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತರ ಶವವನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ವಿಧಿವಿಧಾನಗಳಿಗಾಗಿ ಬನಿಹಾಲ್‌ನ ಉಪ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.
ಆತ್ಮಹತ್ಯೆಯ ಹಿಂದಿನ ಕಾರಣವೇನೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಮಧ್ಯೆ, ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಸರ್ವೀಸ್ ರೈಫಲ್ ಫೈರ್ ಆಗಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
‘ಗುಂಧಾ ಖಾವಾಸ್ ಪ್ರದೇಶದಲ್ಲಿ ದಿನನಿತ್ಯದ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಯ ಸರ್ವಿಸ್ ರೈಫಲ್ ಆಕಸ್ಮಿಕವಾಗಿ ಫೈರಿಂಗ್ ಆಯಿತು. ಇದರಿಂದಾಗಿ ಸಿಬ್ಬಂದಿಯ ಪಾದಕ್ಕೆ ಗಾಯವಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡೇಟಿನ ಶಬ್ದ ಕೇಳಿದ ಕೆಲವು ಗ್ರಾಮ ರಕ್ಷಣಾ ಸಿಬ್ಬಂದಿ ವೈಮಾನಿಕ ಗುಂಡು ಹಾರಿಸಿದರು. ಗಾಯಾಳು ಯೋಧನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.