ಕೆಲಸ ಕೇಳಲು ಬಂದ ಮಹಿಳೆಯ ನಂಬರ್ ತೆಗೆದುಕೊಂಡು ಕಾಲ್ ಮಾಡಿ ಮನೆಗೆ ಬರುತ್ತೇನೆ ಎಂದ ಕ್ಯಾಶಿಯರ್ ; ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ..!
ಬೆಂಗಳೂರು: ಕೆಲಸ ಕೇಳಿಕೊಂಡು (job vacancy) ಬಂದ ಮಹಿಳೆಯೊಂದಿಗೆ ಕ್ಯಾಶಿಯರ್ (cashier) ಅಸಭ್ಯವಾಗಿ ವರ್ತಿಸಿದ್ದಾನೆ. ಕ್ಯಾಶಿಯರ್ ಮಾತಿಗೆ ಸಿಟ್ಟಾದ ಮಹಿಳೆ ಚಪ್ಪಲಿ ಸೇವೆ (Assault Case) ಮಾಡಿದ್ದಾಳೆ. ನಿನ್ನೆ ಬುಧವಾರ ಸಂಜೆ ಬೆಂಗಳೂರಿನ ಬಸವೇಶ್ವರ ನಗರದ ಹೋಟೆಲ್ ಸಮೀಪ ಈ ಘಟನೆ ನಡೆದಿದೆ.
ಮಹಿಳೆಯೊಬ್ಬರು ಕೆಲಸ ಕೇಳಲು ಹೋಟೆಲ್‌ಗೆ ಬಂದಿದ್ದರು. ಸದ್ಯಕ್ಕೆ ಈಗ ಯಾವುದೇ ಕೆಲಸ ಇಲ್ಲ, ಯಾವುದಾದರೂ ಇದ್ದರೆ ಹೇಳುತ್ತಿವಿ. ನಿಮ್ಮ ನಂಬರ್ ಕೊಟ್ಟು ಹೋಗಿ ಎಂದು ಮಹಿಳೆಯ ಫೋನ್ ನಂಬರ್ ಅನ್ನು ಕ್ಯಾಶಿಯರ್ ಪಡೆದಿದ್ದ. ಕೆಲಸ ಸಿಗುವ ಆಸೆಗೆ ಮಹಿಳೆ ಹಿಂದುಮುಂದು ಯೋಚಿಸಿದೆ ಫೋನ್ ನಂಬರ್ ಕೊಟ್ಟು ವಾಪಸ್ ಆಗಿದ್ದರು.
ನಂಬರ್ ಕೊಟ್ಟು ಬಂದ ಸ್ವಲ್ಪ ಸಮಯದಲ್ಲೇ ಕ್ಯಾಶಿಯರ್‌ನಿಂದ ಮಹಿಳೆಗೆ ಫೋನ್ ಕಾಲ್ ಬಂದಿದೆ. ಈ ವೇಳೆ ಮಹಿಳೆಗೆ ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದೀರಿ? ಮದುವೆ ಆಗಿದ್ಯಾ ಎಂದೆಲ್ಲ ಕೇಳಿ ವಿಚಾರಣೆ ಮಾಡಿದ್ದಾನೆ. ಕ್ಯಾಶಿಯರ್‌ನ ಪ್ರಶ್ನೆಗಳೆಲ್ಲವೂ ಅನಗತ್ಯ ಎನಿಸಿದರೂ, ಕೆಲಸ ಸಿಗಬಹುದು ಎಂಬ ಕಾರಣಕ್ಕೆ ಆಕೆ ಉತ್ತರಿಸಲು ಮುಂದಾಗಿದ್ದಾಳೆ.
ಈ ವೇಳೆ ಮಹಿಳೆ ನನಗೆ ಮದುವೆ ಆಗಿದೆ ಎಂದಾಗ, ಅತ್ತ ಕ್ಯಾಶಿಯರ್ ನಿನ್ನ ಗಂಡ ಮನೆಯಲ್ಲಿ ಇಲ್ಲದಾಗ ಹೇಳು ಬರುತ್ತೇನೆ. ನಿನ್ನ ಖರ್ಚು ಎಲ್ಲಾ ನಾನೇ ನೋಡಿಕೊಳ್ಳುತ್ತೇನೆ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ. ಇದರಿಂದ ಶಾಕ್ ಆದ ಮಹಿಳೆ ಫೋನ್ ಕಾಲ್ ಕಟ್ ಮಾಡಿ, ತಕ್ಷಣ ಪತಿಗೆ ವಿಷಯವನ್ನು ಮುಟ್ಟಿಸಿದ್ದಾಳೆ. ನಂತರ ಸ್ಥಳೀಯರಿಗೂ ಹೇಳಿದ್ದಾಳೆ.
ಎಲ್ಲರೂ ಒಟ್ಟಾಗಿ ಹೋಟೆಲ್‌ಗೆ ಬಂದು ಕ್ಯಾಶಿಯರ್‌ನನ್ನು ಹಿಡಿದು ಥಳಿಸಿದ್ದಾರೆ. ಆರೋಪಿಗೆ ಚಪ್ಪಲಿ ಏಟು ಕೊಟ್ಟು ಗ್ರಹಚಾರ ಬಿಡಿಸಿದ್ದಾರೆ. ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಜಾಡಿಸಿದ್ದಾರೆ. ಬಳಿಕ ಬಸವೇಶ್ವರನಗರ ಪೊಲೀಸರಿಗೆ ವಿಚಾರ ತಿಳಿಸಿ ಮಹಿಳೆ ದೂರು ನೀಡಿದ್ದಾರೆ.