ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನಾಲ್ವರು ಸಜೀವ ದಹನ
ಭೋಪಾಲ್: ಮರವೊಂದಕ್ಕೆ ಕಾರು ಢಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಜಿಲ್ಲೆಯ ತಿಮರಿ ಪೊಲೀಸ್ ಠಾಣೆ ವ್ಯಾಪ್ತಿಯ ಪೋಖರ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮುಂಜಾನೆ (ಮೇ.31 ರಂದು) ಮದುವೆಯೊಂದರಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದರು.ಈ ವೇಳೆ ಕಾರು ವೇಗದಿಂದ ಬಂದು ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
ಪರಿಣಾಮ ವರ್ಕಳ ಚರಖೇಡ ಗ್ರಾಮದ ನಿವಾಸಿಗಳಾದ ಅಖಿಲೇಶ್ ಕುಶ್ವಾಹ, ಗೋಲು ಚೌಧರಿ, ರಾಕೇಶ್ ಕುಶ್ವಾಹ ಮತ್ತು ಅವರ ಪತ್ನಿ ಶಿವಾನಿ ಅವರು ಸಜೀವ ದಹನವಾಗಿದ್ದಾರೆ. ಮೃತರು 25 ರಿಂದ 30 ವರ್ಷದ ಅಸುಪಾಸಿನವರು ಎಂದು ಪೊಲೀಸರು ಹೇಳಿದ್ದಾರೆ.
“ಅಪಘಾತದಲ್ಲಿ ಸುಟ್ಟಗಾಯಗಳ ನಂತರ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆರೋಗ್ಯ ಸಮುದಾಯ ಕೇಂದ್ರ ತಿಮರ್ನಿಗೆ ಕಳುಹಿಸಲಾಗಿದೆ” ಎಂದು ಪೊಲೀಸ್ ಅಧೀಕ್ಷಕ (ಎಸ್ಪಿ) ಹಾರ್ದಾ ಸಂಜೀವ್ ಕುಮಾರ್ ಕಾಂಚನ್ ತಿಳಿಸಿದ್ದಾರೆ.