ಬಿಟ್ ಕಾಯಿನ್ ಪ್ರಕರಣದ ಮರು ತನಿಖೆಗೆ ಮುಂದಾಗಲಿದೆ ರಾಜ್ಯ ಸರ್ಕಾರ?
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ವಿವಿಧ ಹಗರಣಗಳನ್ನು ಮರು ತನಿಖೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದೀಗ ಹಿಂದಿನ ಸರ್ಕಾರ ಮುಕ್ತಾಯಗೊಳಿಸಿರುವ ಬಿಟ್ ಕಾಯಿನ್ ಹಗರಣವನ್ನು ಮತ್ತೆ ತನಿಖೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ, ಬಿಟ್ ಕಾಯಿನ್ ವಿಚಾರ ಹಾಗೂ ಘಟನೆಯ ಬಗ್ಗೆ ಸಂಪೂರ್ಣವಾಗಿ ಮರು ತನಿಖೆ ನಡೆಸುತ್ತೇವೆ. ಪ್ರಕರಣವನ್ನು ಸಿಐಡಿಗೆ ವಹಿಸಬೇಕಾ/ಬೇಡವಾ ಎಂಬುದನ್ನು ಸಧ್ಯದಲ್ಲೇ ನಿರ್ಧರಿಸುತ್ತೇವೆ. ಸದ್ಯ ಸಿಐಡಿ ಪ್ರಬಲವಾಗಿದೆ ಎಂದರು.
ರಾಷ್ಟ್ರಮಟ್ಟದಲ್ಲಿ 2021 ಹಾಗೂ 2022ರಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿ ತಣ್ಣಗಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಿಟ್ ಕಾಯಿನ್ ಹಗರಣದ ಮರು ತನಿಖೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತು ನಿಶ್ಚಿಯಂತೆಯಾಗಿದ್ದ ಹಲವು ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಮತ್ತೆ ಬಿಟ್ ಕಾಯಿನ್ ಭೀತಿ ಶುರುವಾಗಿದೆ. ಏತನ್ಮಧ್ಯೆ ಸದ್ಯ ಶ್ರೀಕಿ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬ ಮಾಹಿತಿ ಪೊಲೀಸರಿಗೂ ಗೊತ್ತಿಲ್ಲ.
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಶ್ರೀಕಿ ವಿರುದ್ಧ ಕೋರ್ಟ್ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು ಬಿಟ್ಟರೆ ಬಿಟ್ ಕಾಯಿನ್ ವಹಿವಾಟಿಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಹೇಳಲಾಗಿತ್ತು. ಅಧಿಕಾರಿಗಳು ಹಾಗೂ ರಾಜಕಾರಣಿಗಳ ಒತ್ತಡದಿಂದ ಪಾರದರ್ಶಕ ತನಿಖೆಯಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈಗ ಕಾಂಗ್ರೆಸ್ ಸರ್ಕಾರ ಮರು ತನಿಖೆಗೆ ವಹಿಸುತ್ತಿದ್ದು, ಪುನಃ ಮೊದಲಿನಿಂದ ಹಗರಣದ ತನಿಖೆ ಆರಂಭವಾಗಲಿದೆ.