Thalapathy Vijay: ಸಿಎಎ ಜಾರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ ದಳಪತಿ ವಿಜಯ್..!
ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷ(Vetri Kazhagam Party)ದ ನಾಯಕರೂ ಆಗಿರುವ ದಳಪತಿ ವಿಜಯ್(Thalapathy Vijay) ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಖಾಯಿದೆ(Citizenship Amendment Act – CAA) ಜಾರಿ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈಗ ಕೇಂದ್ರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಸ್ವೀಕಾರಾರ್ಹವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಮಾಡುತ್ತಿರುವಾಗ ಇಂತಹ ಕಾಯಿದೆಗಳ ಅವಶ್ಯಕತೆ ಏನಿದೆ? 2019 ರ ಪೌರತ್ವ ತಿದ್ದುಪಡಿ ಖಾಯಿದೆಯಂತಹ ಯಾವುದೇ ಖಾಯಿದೆಗಳನ್ನು ಒಪ್ಪಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಈ ಕಾಯಿದೆ ಜಾರಿಗೆ ಬರಬಾರದು’ ಎಂದು ವಿಜಯ್ ಒತ್ತಾಯಿಸಿದ್ದಾರೆ.
ಇನ್ನು, ಕೇಂದ್ರ ಸರ್ಕಾರ ಸಿಎಎ ಜಾರಿಗೆ ತರುತ್ತಿದ್ದಂತೇ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದು ಚುನಾವಣೆಯಲ್ಲಿ ಲಾಭ ಪಡೆಯಲು ಮೋದಿ ಸರ್ಕಾರದ ಹುನ್ನಾರ ಎಂದು ಎಐಎಂಐಎಂ ಪಕ್ಷದ ನಾಯಕ ಅಸಾವುದ್ದೀನ್ ಒವೈಸಿ ಹೇಳಿದ್ದಾರೆ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಇದನ್ನು ಜಾರಿಗೆ ತರಲು ಬಿಡಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಖಾಯಿದೆಯಲ್ಲಿ ಮುಸ್ಲಿಮರನ್ನು ಸೇರಿಸಲಾಗಿಲ್ಲ ಎನ್ನುವುದೇ ವಿಪಕ್ಷಗಳ ತಕರಾರಿಗೆ ಕಾರಣ.