Shiradi Ghat: ಶಿರಾಡಿ ಘಾಟ್ನಲ್ಲಿ ಭೀಕರ ಭೂಕುಸಿತ, ಮಣ್ಣಿನಡಿ ಸಿಲುಕಿದ ವಾಹನಗಳು
Shiradi Ghat: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ (Shiradi Ghat) ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣನಡಿ ಸಿಲುಕಿವೆ ಎನ್ನಲಾಗಿದೆ. ಸತತ ಮಳೆಯಿಂದ ದೊಡ್ಡತಪ್ಲೆ ಬಳಿ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿದೆ.
ಈ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಮಣ್ಣು ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದೇ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದವರು ಅದರಡಿ ಸಿಲುಕಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ. ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ.
ವಾಹನ ಸಂಚಾರ ಸಂಪೂರ್ಣ ಬಂದ್
ಸದ್ಯ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬರುತ್ತಿರುವ ವಾಹನಗಳನ್ನು ಗುಂಡ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆ.
ಜುಲೈ 18ರಂದು ಶಿರಾಡಿ ಘಾಟಿ ರಸ್ತೆಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ರೀತಿಯ ಹಾನಿ ಸಂಭವಿಸಿರಲಿಲ್ಲ. ನಂತರ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜುಲೈ 20ರಿಂದ ಹಗಲು ಸಂಚಾರಕ್ಕೆ ಮಾತ್ರ (ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ) ಅನುಮತಿ ನೀಡಲಾಗಿತ್ತು.
ಎರಡು ದಿನಗಳ ಹಿಂದಷ್ಟೇ ಎತ್ತಿನಹಳ್ಳದ ಬಳಿ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಣ್ಣು ತೆರವು ಮಾಡಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಭೂಕುಸಿತ ಸಂಭವಿಸಿದ್ದು, ಸಂಚಾರ ಸ್ಥಗಿತಗೊಂಡಿದೆ.
ಸಂಚಾರ ಸಂಪೂರ್ಣ ಅಸ್ತವ್ಯಸ್ತ
ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲಾಧಿಕಾರಿಗಳು ಈ ರಸ್ತೆಯನ್ನು ಬಳಸದಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನಿಂದ ಮಂಗಳೂರು ತಲುಪಲು ಬಯಸುವ ವಾಹನ ಸವಾರರು ಪರ್ಯಾಯವಾಗಿ ಚಾರ್ಮಾಡಿ ಮತ್ತು ಸಂಪಾಜೆ ಘಾಟ್ ರಸ್ತೆಗಳಲ್ಲಿ ಸಂಚರಿಸಬಹುದಾಗಿದೆ.
ಘಟ್ಟಪ್ರದೇಶವನ್ನು ಕರಾವಳಿಯೊಂದಿಗೆ ಜೋಡಿಸುವ ಪ್ರಮುಖ ಘಾಟಿ ರಸ್ತೆಯಾದ ಚಾರ್ಮಾಡಿ ರಸ್ತೆಯಲ್ಲೂ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿರುವುದರಿಂದ ಸಂಚಾರ ದುಸ್ತರವಾಗಿದೆ. ಎಲ್ಲ ಅಡೆತಡೆಗಳೂ ಶೀಘ್ರವೇ ತೆರವುಗೊಳ್ಳುವ ಸಾಧ್ಯತೆ ಇದೆ.
ಸಕಲೇಶಪುರದಲ್ಲಿ ಭೂಕುಸಿತ: ಕೊಚ್ಚಿ ಹೋದ ರಸ್ತೆ
ಹಾಸನ: ಮಂಗಳವಾರ ಮುಂಜಾನೆ ಸುರಿದ ಮಳೆ ಮತ್ತು ಭೂಕುಸಿತದಿಂದ ಸಕಲೇಶಪುರ ತಾಲೂಕಿನ ಕುಂಬರಾಡಿ ಮತ್ತು ಹಾರ್ಲೆ ಎಸ್ಟೇಟ್ ನಡುವಿನ ರಸ್ತೆ ಕೊಚ್ಚಿ ಹೋಗಿದೆ.
ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಿಂದಾಗಿ ಸಕಲೇಶಪುರ ತಾಲೂಕಿನ ಕೆಲವೆಡೆ ಭೂಕುಸಿತ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಾರೀ ಮಳೆಗೆ ರಸ್ತೆ ಕೊಚ್ಚಿಹೋಗಿ 80 ಅಡಿ ಆಳಕ್ಕೆ ಕುಸಿದಿದೆ. ಅಕ್ಕಪಕ್ಕದ ಐದು ಗ್ರಾಮಗಳು ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಳೆದುಕೊಂಡಿವೆ. ಮಲ್ಲೇಗದ್ದೆ, ಕಾಡುಮನೆ ಮತ್ತು ಹಾರ್ಲೆ ಜನರು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭೂಕುಸಿತಕ್ಕೆ ಹೆದರಿ ಕಾಫಿ ಎಸ್ಟೇಟ್‌ಗಳಿಗೆ ಭೇಟಿ ನೀಡುವುದನ್ನು ಗ್ರಾಮಸ್ಥರು ನಿಲ್ಲಿಸಿದ್ದಾರೆ. ಎತ್ತಿನಹೊಳೆ ಕಾಲುವೆ ಕಾಮಗಾರಿಯು ಭೂಕುಸಿತ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲಿದೆ.
ಘಟನಾ ಸ್ಥಳಕ್ಕೆ ಕಂದಾಯ, ಪಿಡಬ್ಲ್ಯುಡಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದರು. ಕಳೆದ 24 ಗಂಟೆಗಳಿಂದ ಬೆಂಗಳೂರು ಮಂಗಳೂರು ಎನ್‌ಎಚ್ 75 ಮತ್ತು ಸಕಲೇಶಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಕುಸಿತ ಮುಂದುವರಿದಿದೆ ಎಂದು ಇಲ್ಲಿಗೆ ತಲುಪಿದ ವರದಿಗಳು ತಿಳಿಸಿವೆ. ಹಾಸನ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆಯಿಂದಲೇ ಭಾರೀ ಮಳೆಯಾಗುತ್ತಿದೆ. ಆದರೂ ಜಿಲ್ಲಾಡಳಿತ ಶಾಲೆಗಳಿಗೆ ರಜೆ ನೀಡಿಲ್ಲ. ಸಕಲೇಶಪುರ ತಾಲ್ಲೂಕಿನ ಹಲವು ಕಡೆ ಸಂಪರ್ಕ ಕಡಿತಗೊಂಡಿದೆ.