ಕುಂದಾಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಮಹಿಳೆ ಮೃತ್ಯು - ಇಬ್ಬರು ಗಂಭೀರ..!
ಉಡುಪಿ : ಉಡುಪಿ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಅಪರಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಎದುರುಗಡೆ ಈ ದುರ್ಘಟನೆ ನಡೆದಿದೆ. ಮುಂಬಯಿ ಯಿಂದ ಕೇರಳ ರಾಜ್ಯದ ಮಾಯಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಪ್ರಯಾಣಿಸುತ್ತಿದ್ದ ಟೊಯೋಟೊ ಇನ್ನೋವಾ ಕಾರು ಅಪಘಾತಗೀಡಾಗಿದೆ. ಅಪಘಾತದಲ್ಲಿ ಮೃತಪಟ್ಟ ಮಹಿಳೆ ಸಮೀರಾ (45) ಎಂದು ಗುರುತಿಸಲಾಗಿದೆ. ಹಾಗೂ ಗಂಭೀರ ಗಾಯಗೊಂಡ ಮೋನವರ್ ಟಿ. ಪಿ. (49) ಮತ್ತು ಪುತ್ರ ಸುಹೇಲ್ (19) ಇವರನ್ನು ಮಣಿಪಾಲ ಕೆ ಎಂ ಸಿ ಗೆ ಸಾಗಿಸಲಾಗಿದೆ.
ಕುಂದಾಪುರ ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಸಮೀಪದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ಫೈ ಓವರ್ ಮೇಲೆ ಚಲಿಸುತ್ತಿದ್ದ ಕಾರು ಏಕಾಏಕಿ ಸರ್ವಿಸ್ ರಸ್ತೆ ಮತ್ತು ಹೆದ್ದಾರಿ ನಡುವಿನ ಡಿವೈಡೆರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಡಿಕ್ಕಿ ಹೊಡೆದ ಫಾರ್ಚುನರ್ ಇನ್ನೋವಾ ಕಾರು ಕಬ್ಬಿಣದ ಗ್ರಿಲ್ ಗಳನ್ನು ಮುರಿದು ಸರ್ವಿಸ್ ರಸ್ತೆ ಮೇಲೆ ತಲೆಕೆಳಗಾಗಿ ಬಿದ್ದಿದೆ ಸಂಪೂರ್ಣ ನುಚ್ಚು ನೂರಾಗಿರುವ ಇನ್ನೋವಾ ಕಾರಿನಲ್ಲಿದ್ದ ಮೂವರ ಪೈಕಿ ಓರ್ವ ಮಹಿಳೆ ಮೃತಪಟ್ಟಿರುತ್ತಾರೆ.
ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಸರ್ವಿಸ್ ರಸ್ತೆಯಲ್ಲಿ ಮಗುಚಿ ಬಿದ್ದ ಕಾರಿನಿಂದಾಗಿ ಸಂಚಾರ ಸಮಸ್ಯೆ ಉಂಟಾಗಿದ್ದು ಸ್ಥಳೀಯ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟರು.
ಮನೆಯೊಳಗೆ ನುಗ್ಗಿಚೂರಿ ಇರಿತ-ಆರೋಪಿಗೆ ನ್ಯಾಯಾಂಗ ಬಂಧನ
ಬಂಟ್ವಾಳ: ಮನೆಯೊಳಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಅಬ್ದುಲ್ ರಹಿಮಾನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.ಈತನನ್ನು ಪರಂಗಿಪೇಟೆಯಲ್ಲಿ ಬಂಧಿಸಲಾಗಿದೆ.
ಘಟನೆಯ ವಿವರ:
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ ಮಹಮ್ಮದ್ ರಮೀಜ್ ( 19) ಎಂಬಾತನಿಗೆ ಮನೆಗೆ ನುಗ್ಗಿ ಚೂರಿಯಿಂದ ಇರಿಯಲಾಗಿತ್ತು.
ಅಬ್ದುಲ್ ರಹಿಮಾನ್ ಎಂಬಾತ ಚೂರಿ ಇರಿದು ಪರಾರಿಯಾಗಿದ್ದಬಳಿಕ ಈತನಿಗಾಗಿ ಪೋಲೀಸ್ ತಂಡ ಹುಡುಕಾಟ ನಡೆಸುತ್ತಿತ್ತು.ಇದೀಗ ಆರೋಪಿಯನ್ನು ಪೋಲೀಸರು ಪರಂಗಿಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಪರಂಗಿಪೇಟೆಯಲ್ಲಿ ಈ ಹಿಂದೆ ನಡೆದ ಚೂರಿ ಇರಿತ ಪ್ರಕರಣವೊಂದರ ಆರೋಪಿ ಕೂಡ ಆಗಿದ್ದ ಎಂದು ಪೋಲೀಸ್ ಮೂಲಗಳು ತಿಳಿಸಿವೆ.ಆರೋಪಿ ಅಬ್ದುಲ್ ರಹಿಮಾನ್ ಯಾವುದೋ ಹಣಕಾಸಿನ ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಮೀಜ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಪೋನ್ ಮಾಡಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು, ಮನೆಯೊಳಗೆ ಬಂದು ಚೂರಿಯಿಂದ ಎರಡುಬಾರಿ ಇರಿದು ಪರಾರಿಯಾಗಿದ್ದ. ಮನೆಯೊಳಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.