ಭೀಕರ ಅಪಘಾತಕ್ಕೆ ಕಾರು ಜಖಂ – ಅಪಾಯದಿಂದ ಪಾರಾದ ರಕ್ತಚಂದನ ಕಳ್ಳರು!
ಚಿಕ್ಕಬಳ್ಳಾಪುರ: ಅಕ್ರಮವಾಗಿ ರಕ್ತ ಚಂದನ (Red Sandalwood) ಸಾಗಿಸುತ್ತಿದ್ದ ಕಳ್ಳರ ಕಾರು ಭೀಕರ ಅಪಘಾತಕ್ಕೀಡಾಗಿ (Accident) ನಜ್ಜುಗುಜ್ಜಾಗಿದ್ದರೂ ಕಳ್ಳರು ಪವಾಡವೆಂಬಂತೆ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಸಾದಲಿ ಕ್ರಾಸ್ ಬಳಿ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಕಾರು ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ಗುರುತೇ ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿ ಬಿದ್ದಿದೆ. ಕಾರಿನಲ್ಲಿದ್ದ ರಕ್ತಚಂದನ ಕಳ್ಳರಾದ ನಾಗರಾಜು, ನಾಗೇಂದ್ರ, ಶ್ರೀನಿವಾಸ್ ಮೂವರಿಗೂ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಅದೃಷ್ಟವಶಾತ್ ಎಂಬಂತೆ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ 24 ರಕ್ತಚಂದನದ ತುಂಡುಗಳನ್ನು ಸೀಟಿನ ಕೆಳಭಾಗದಲ್ಲಿ ಇಟ್ಟುಕೊಂಡು ಸಾಗಿಸಲಾಗುತ್ತಿತ್ತು. ನೆರೆಯ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ರಕ್ತಚಂದನದ ತುಂಡುಗಳನ್ನ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ರಕ್ತಚಂದನದ ತುಂಡುಗಳನ್ನ ಪೇರೇಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಸಿಪಿಐ ನಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಬಸ್, ಕಾರು ಮುಖಾಮುಖಿ ಡಿಕ್ಕಿ – 9 ಮಂದಿಗೆ ಗಂಭೀರ ಗಾಯ
ಚಿಕ್ಕಮಗಳೂರು: ಸರ್ಕಾರಿ ಬಸ್ ಮತ್ತು ಕಾರು (Car) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 9 ಮಂದಿ ಗಂಭೀರ ಗಾಯಗೊಂಡ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ (Tarikere) ತಾಲೂಕಿನ ಬೆಲೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ 9 ಜನರು ಭದ್ರಾವತಿ (Bhadravathi) ಮೂಲದವರು ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ (KSRTC) ಬಸ್ ಶಿವಮೊಗ್ಗದಿಂದ ತರೀಕೆರೆಗೆ ತೆರಳುತ್ತಿದ್ದು, ಕಾರು ತರೀಕೆರೆಯಿಂದ ಭದ್ರಾವತಿಗೆ ತೆರಳುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭೀಕರ ಅಪಘಾತ ಉಂಟಾಗಿದೆ.
ಸರ್ಕಾರಿ ಬಸ್ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ 9 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.