ರಾಜ್ಯದಲ್ಲಿ ತಾಪಮಾನ 2 ಡಿಗ್ರಿ ಏರಿಕೆ ; ನೀರಿನ ಪ್ರಮಾಣ ಇಳಿಕೆ..!
ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಭಾರೀ ಕಡಿಮೆಯಾಗಿದ್ದು, ಇದರ ಪರಿಣಾಮ ಉಷ್ಣಾಂಶ ಗರಿಷ್ಠ ವಾಡಿಕೆಗಿಂತ ಸರಾಸರಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಈಗಾಗಲೇ ರಾಜ್ಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಇನ್ನೂ ಎರಡು-ಮೂರು ತಿಂಗಳು ಬೇಸಿಗೆ ಎದುರಿಸುವುದು ದೊಡ್ಡ ಸವಾಲಾಗಿದೆ.
ಬೆಂಗಳೂರು ಸೇರಿಂದತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ಬಿಸಿಲಿನ ಝಳಕ್ಕೆ ಜನ- ಜಾನುವಾರು ತತ್ತರಿಸಿ ಹೋಗಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಮತ್ತೆ ಎರಡು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ರಾಜ್ಯದ ತಾಪಮಾನವು ಕಳೆದ ವರ್ಷ ಫೆಬ್ರವರಿಗಿಂತ ಈ ಬಾರಿ ಸರಾಸರಿ 1-2 ಡಿಗ್ರಿ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಜನ ಎಚ್ಚರ ವಹಿಸಬೇಕಾಗಿದೆ. ಆದರೆ ಈ ಬಾರಿ ಬಿಸಿಗಾಳಿ ಅಲೆಯ ಪರಿಸ್ಥಿತಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಮುನ್ಸೂಚನೆ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬೆಂಗಳೂರಿನ ಗರಿಷ್ಠ ತಾಪಮಾನ 31.2 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಇದೆ. ಮಾರ್ಚ್ ತಿಂಗಳಿಗೂ ಮುನ್ನ ಮತ್ತಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣ ಮತ್ತು ಗಾಳಿಯಿಂದ ಕಳೆದ ಕೆಲ ದಿನಗಳು ವಾತಾವರಣ ಸಾಮಾನ್ಯವಾಗಿತ್ತು. ಆದರೆ ಇದೀಗ ಮತ್ತೆ ತಾಪಮಾನವು ಮತ್ತೆ ಏರಲು ಪ್ರಾರಂಭಿಸಿದ್ದು, ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಳೆದ ವರ್ಷ ಮಾರ್ಚ್‌ಗೆ ಹೋಲಿಸಿದರೆ, ಈ ಬಾರಿ ತಾಪಮಾನ ಮತ್ತಷ್ಟು ಏರುವ ಸಾಧ್ಯತೆ ಹೆಚ್ಚಿದೆ.
ರಾಜ್ಯದಲ್ಲಿ ತಾಪಮಾನ ಏರಿಕೆಯಿಂದ ಜನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಎಲ್ಲಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಬೆಂಗಳೂರಿನಲ್ಲಿಯೂ ಅನೇಕ ಭಾಗಗಳಲ್ಲಿ ಬೋರ್‌ವೆಲ್‌ನಲ್ಲಿ ನೀರು ಬರಿದಾಗಿದ್ದು, ಖಾಸಗಿ ಟ್ಯಾಂಕರ್‌ಗಳಿಗೆ ಜನ ಅವಲಂಭಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಜಿಲ್ಲೆ ಭಾಗಗಳಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ಸಹ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಭೀಕರ ಬೇಸಿಗೆ ಎದುರಿಸಬೇಕಾದ ಸವಾಲು ರಾಜ್ಯದ ಜನತೆ ಮುಂದಿದೆ.