Tecno Spark Go (2023): ಬೆಲೆ ಕೇವಲ 6,999 ರೂ.: ಟೆಕ್ನೋದಿಂದ ಅತಿ ಕಡಿಮೆ ದರಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್ ಬಿಡುಗಡೆ
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಪೈಕಿ ಇದೀಗ ಹೊಸ ವರ್ಷದ ಪ್ರಯುಕ್ತ ತನ್ನ ಹೊಸ ಟೆಕ್ನೋ ಸ್ಪಾರ್ಕ್ ಗೋ 2023 (Tecno Spark Go 2023) ಫೋನನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದರೂ ಅತ್ಯುತ್ತಮ ಫೀಚರ್ಗಳಿಂದ ಕೂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ಫೀಚರ್ಸ್ ಎಂಬುದನ್ನು ನೋಡೋಣ.
ಟೆಕ್ನೋ ಕಂಪೆನಿ ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.56 ಇಂಚಿನ ಹೆಚ್‌ಡಿ + ಐಪಿಎಸ್ ಡಿಸ್‌ಪ್ಲೇ ಹೊಂದಿದೆ. ಕ್ವಾಡ್ ಕೋರ್ ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಎಫ್ / 1.85 ಲೆನ್ಸ್ ಹೊಂದಿದೆ. ಇನ್ನು ದ್ವಿತೀಯ ಕ್ಯಾಮೆರಾ AI ಬೆಂಬಲಿತ ಆಗಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಬೇಸಿಕ್ ಫೋಟೊ ಎಡಿಟಿಂಗ್ ಆಯ್ಕೆಗಳು ಇರಲಿವೆ. ಮುಂಭಾಗ ಎಲ್ಇಡಿ ಫ್ಲ್ಯಾಸ್ ಆಯ್ಕೆ ಇರುವುದು ವಿಶೇಷ.
ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 10 ವೋಲ್ಟ್ ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. 124 ಗಂಟೆಗಳ ಕಾಲ ಮ್ಯೂಸಿಕ್ ಕೇಳಬಹುದು, 12 ಗಂಟೆಗಳ ಕಾಲ ಗೇಮಿಂಗ್ ಟೈಮ್ ನೀಡಲಾಗಿದೆ ಎಂದು ಕಂಪನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳು 4ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್ 5 ಅನ್ನು ಒಳಗೊಂಡಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಒಳಗೊಂಡಿದೆ.
ಈ ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 3GB RAM ಮತ್ತು 32GB ಶೇಖರಣಾ ಮಾದರಿಗೆ 6,999 ರೂ. ಬೆಲೆ ನಿಗದಿ ಮಾಡಲಾಗಿದೆ. ಇದರ ಜೊತೆಗೆ 3GB RAM ಮತ್ತು 64GB, 4GB RAM ಮತ್ತು 64GB ಸ್ಟೋರೇಜ್ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಈ ಸ್ಮಾರ್ಟ್‌ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಅಥವಾ ಅಮೆಜಾನ್ನಲ್ಲಿ ಸೇಲ್ ಕಾಣಲಿದೆ.