ಧಾರ್ಮಿಕ ಆಚರಣೆಯ ಸಂಪ್ರದಾಯದೊಂದಿಗೆ ಪರಿಸರ ಜಾಗೃತಿಯ ಅಪೂರ್ವ ಅರಿವು ಮೂಡಿಸುತ್ತಿರುವ ಧಾರ್ಮಿಕ- ಪರಿಸರ ರಾಯಭಾರಿ ತಮ್ಮಣ್ಣ ಶೆಟ್ಟಿ
ಮಂಗಳೂರು: ಕರಾವಳಿಯ ದೈವ ದೇವರುಗಳ ವಿಷಯದಲ್ಲಿ ಮೂಲ ಸಂಸ್ಕೃತಿಯ ಪರಿಚಯದೊಂದಿಗೆ ಜನರನ್ನು ಜಾಗೃತಿಗೊಳಿಸುವ ಮೂಲಕ ಪರಿಸರ ಪ್ರೇಮವನ್ನು ಉದ್ದೀಪನ ಗೊಳಿಸುವ ಕಾರ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಮ್ಮಣ್ಣ ಶೆಟ್ಟಿ (Tammanna Shetty) ಮಾಡುತ್ತಿದ್ದಾರೆ.
ನಾಗಬನಗಳು ಈ ಪ್ರದೇಶದ ಕಾಡು, ಪರಿಸರ ಸಂರಕ್ಷಣೆಯಲ್ಲಿ ಬಹು ದೊಡ್ಡ ಪಾತ್ರ ನಿರ್ವಹಿಸಿದೆ. ಭವಿಷ್ಯದಲ್ಲಿ ನಾಗಬನಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ನಾವು ಇಡಬೇಕು ಎಂಬ ಧಾರ್ಮಿಕ- ಪರಿಸರ ರಾಯಬಾರಿ ತಮ್ಮಣ್ಣ ಶೆಟ್ಟಿ (Tammanna Shetty) ಅಭಿಪ್ರಾಯ ಪಡುತ್ತಾರೆ.
ಧಾರ್ಮಿಕ ಕ್ರಿಯೆಗಳು ಪರಿಸರಕ್ಕೆ ಪೂರಕವಾಗಿರಬೇಕು ಆ ಮೂಲಕ ಕರಾವಳಿಯ ಪರಿಸರವನ್ನು ಸಂರಕ್ಷಿಸುವ ಬದ್ಧತೆ ಹೊಂದಿರಬೇಕು ಎಂಬ ಜಾಗೃತಿಯ ಮಾತುಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿರುವ ತಮ್ಮಣ್ಣ ಶೆಟ್ಟಿ, ಆ ಮೂಲಕ ವಿಶ್ವದ ಪರಿಸರವನ್ನು ಸಂರಕ್ಷಿಸುವಲ್ಲಿ ಧಾರ್ಮಿಕ ಚಟುವಟಿಕೆಗಳು ಬಹುದೊಡ್ಡ ಪಾತ್ರ ವಹಿಸಲಿದೆ ಎಂಬುದನ್ನು ಸ್ಪಷ್ಟವಾಗಿ ಸಾರಿದ್ದಾರೆ.
ನಮ್ಮ ಆರಾಧನೆಗಳು ಪ್ರಕೃತಿ ಆರಾಧನೆಗಳು. ಪ್ರಕೃತಿ ಸಂರಕ್ಷಣೆಯ ಆರಾಧನೆಗಳು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಪೂರ್ವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವ ತಮ್ಮಣ್ಣ ಶೆಟ್ಟಿ ತಮ್ಮ ಉಪನ್ಯಾಸ, ಮಾಧ್ಯಮಗಳ ಮೂಲಕ ವಿಚಾರಗಳನ್ನು ಹಂಚಿಕೊಳ್ಳುವ ಕ್ರಮ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಗರ ಪಂಚಮಿ ದಿನ ನಮ್ಮ ಪೂರ್ವಜರು ನಾಗನ ಆರಾಧನೆಯೊಂದಿಗೆ ಪರಿಸರ ಸಂರಕ್ಷಣೆಯ ಬಹುದೊಡ್ಡ ಪರಂಪರೆಯನ್ನು ನಮಗೆ ಬಿಟ್ಟು ಹೋಗಿರುವುದು ಈ ದಿನ ಬಹಳ ಮೌಲ್ಯವಾಗಿದೆ, ಪವಿತ್ರವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ವಿಶ್ವವೇ ಮಾಲಿನ್ಯ ಹಾಗೂ ಪರಿಸರ ಸಂರಕ್ಷಣೆಯ ಬಹುದೊಡ್ಡ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮೂಲ ಸಂಸ್ಕೃತಿಯ ಆರಾಧನೆಯೊಂದಿಗೆ, ಧಾರ್ಮಿಕ ಕಟ್ಟುಪಾಡುಗಳ ಜೊತೆಯೊಂದಿಗೆ ಧಾರ್ಮಿಕ ಆಚರಣೆಗಳನ್ನು ಪರಿಸರ ಸಂರಕ್ಷಣೆಯ ಬಹುದೊಡ್ಡ ಅಸ್ತ್ರವಾಗಿ ತಮಣ್ಣ ಶೆಟ್ಟಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಪರಿಸರ ಸಂರಕ್ಷಣೆ ವಿಷಯದಲ್ಲಿ ಅವರು ಈ ನಾಡಿಗೆ ನೀಡುತ್ತಿರುವ ಬಹುದೊಡ್ಡ ಕೊಡುಗೆ ಎಂದು ವಿಶ್ಲೇಷಿಸಲಾಗುತ್ತಿದೆ.