ಜನನಿಬಿಡ ರಸ್ತೆಯಲ್ಲಿ ಕೊಲೆ ಆರೋಪಿಯನ್ನು ಅಟ್ಟಾಡಿಸಿ ಕೊಲೆ!
ಚೆನ್ನೈ(ಜೂ.18): ತಮಿಳುನಾಡಿನ ಕಾರೈಕುಡಿ (KARIKUDI) ಜಿಲ್ಲೆಯಲ್ಲಿ ಭಾನುವಾರ 29 ವರ್ಷದ ಯುವಕನನ್ನು ಹತ್ಯೆಗೈದ ಐವರು ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಂದಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಮಧುರೈ ನಿವಾಸಿ ಅರಿವಳಗನ್ ಅಲಿಯಾಸ್ ವಿನಿತ್ ಎಂದು ಗುರುತಿಸಲಾಗಿದ್ದು, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿನಿತ್ ಜನನಿಬಿಡ ರಸ್ತೆಯಲ್ಲಿ ಹೆಜ್ಜೆ ಹಾಕಿದಾಗ, ಎಸ್‌ಯುವಿಯಲ್ಲಿ ಬಂದ ಐವರು ವಿನಿತ್‌ನನ್ನು ಸುತ್ತುವರೆದು ಬೆನ್ನಟ್ಟಿರುವುದು ವಿಡಿಯೋದಲ್ಲಿ ದಾಖಲಾಗಿದೆ. ದಾಳಿಯಿಂದಾಗಿ ಸಮತೋಲನ ಕಳೆದುಕೊಂಡ ವಿನೀತ್ ರಸ್ತೆಯಲ್ಲೊಯೇ ನೆಲಕ್ಕೆ ಬಿದ್ದಿದ್ದಾರೆ. ಜನರು ನೋಡುತ್ತಿರುವಂತೆಯೇ ವಿನಿತ್‌ನ ಮೇಲೆ ಕರುಣೆಯಿಲ್ಲದೆ ಕೋಲು ಮತ್ತು ರಾಡ್‌ಗಳಿಂದ ಥಳಿಸಿದ್ದು ಕೂಡ ವೀಡಿಯೊದಲ್ಲಿ ಕಾಣಬಹುದು. ವಿನೀತ್‌ನ ರಕ್ಷಣೆಗೆ ಈ ವೇಳೆ ನೀಲಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ಆಗಮಿಸಿದ್ದಾರೆ ಹಾಗಿದ್ದರೂ ಇದು ವ್ಯರ್ಥವಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಕೊಲೆ ಮಾಡಿದ ಬಳಿಕ ಐವರೂ ಕಾರಿನಲ್ಲಿ ಪರಾರಿಯಾಗಿದ್ದು, ವಿನೀತ್ ರಸ್ತೆಯಲ್ಲಿಯೇ ಬಿದ್ದಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪೊಲೀಸರು ಆತನ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ. ವಿನಿತ್ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದು, ಇಬ್ಬರು ಸ್ನೇಹಿತರೊಂದಿಗೆ ಲಾಡ್ಜ್‌ನಲ್ಲಿ ತಂಗಿದ್ದ.