T20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ
T20 ವಿಶ್ವಕಪ್ 2024, AUS vs AFG: ವಿಶ್ವ ಚಾಂಪಿಯನ್ನರ ವಿರುದ್ಧ ಮೊದಲ ಗೆಲುವು ಸಾಧಿಸಿ ಹೊಸ ಇತಿಹಾಸವನ್ನೇ ಬರೆದ ಅಫ್ಘಾನಿಸ್ತಾನ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ ಇತಿಹಾಸ ನಿರ್ಮಿಸಿದೆ. ಸೇಂಟ್ ವಿನ್ಸೆಂಟ್‌ನ ಕಿಂಗ್‌ಸ್ಟೌನ್‌ನಲ್ಲಿರುವ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ T20 ವಿಶ್ವಕಪ್ 2024 ಸೂಪರ್ 8 ಪಂದ್ಯದಲ್ಲಿ ಆಸೀಸ್ ತಂಡವನ್ನು 21 ರನ್‌ಗಳಿಂದ ಸೋಲಿಸಿದರು.
ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 118 ರನ್ ಪೇರಿಸಿದ ಈ ಜೋಡಿ ಅಫ್ಘಾನ್ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಇದರ ನಡುವೆ 49 ಎಸೆತಗಳಲ್ಲಿ 60 ರನ್ ಬಾರಿಸಿ ರಹಮಾನುಲ್ಲಾ ಗುರ್ಬಾಝ್ ಔಟಾದರೆ, ಇದರ ಬೆನ್ನಲ್ಲೇ 51 ರನ್ ಬಾರಿಸಿದ್ದ ಇಬ್ರಾಹಿಂ ಝದ್ರಾನ್ ಕೂಡ ವಿಕೆಟ್ ಒಪ್ಪಿಸಿದರು.
ಆರಂಭಿಕರಿಬ್ಬರ ಪತನದೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಬೌಲರ್ಗಳು ಅಫ್ಘಾನಿಸ್ತಾನ್ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಇದರ ನಡುವೆ ಒತ್ತಡಕ್ಕೆ ಒಳಗಾದ ಅಫ್ಘಾನಿಸ್ತಾನ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನ್ 148 ರನ್ ಕಲೆಹಾಕಿತು.
149 ರನ್ಗಳ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನವೀನ್ ಉಲ್ ಹಕ್ ಮೊದಲ ಓವರ್ನಲ್ಲೇ ಆಘಾತ ನೀಡಿದ್ದರು. ಟ್ರಾವಿಸ್ ಹೆಡ್ (0) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ನವೀನ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (12) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಡೇಂಜರಸ್ ಡೇವಿಡ್ ವಾರ್ನರ್ (3) ವಿಕೆಟ್ ಪಡೆಯುವಲ್ಲಿ ಮೊಹಮ್ಮದ್ ನಬಿ ಯಶಸ್ವಿಯಾದರು.
ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಫ್ಘಾನ್ ಬೌಲರ್ಗಳನ್ನು ಮನಸ್ಸೋ ಇಚ್ಛೆ ದಂಡಿಸಿದ ಮ್ಯಾಕ್ಸ್ವೆಲ್ 41 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 59 ರನ್ ಬಾರಿಸಿದರು. ಈ ಹಂತದಲ್ಲಿ ನೂರ್ ಅಹ್ಮದ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಮ್ಯಾಕ್ಸ್ವೆಲ್ ಹೊರ ನಡೆಯಬೇಕಾಯಿತು.
ಇನ್ನು ಮಾರ್ಕಸ್ ಸ್ಟೋಯಿನಿಸ್ (11), ಟಿಮ್ ಡೇವಿಡ್ (2) ಮತ್ತು ಮ್ಯಾಥ್ಯೂ ವೇಡ್ (5) ಬಂದ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದರು. ಈ ಮೂಲಕ ಅಫ್ಘಾನಿಸ್ತಾನ್ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅತ್ತ ಒತ್ತಡಕ್ಕೆ ಸಿಲುಕಿದ ಪ್ಯಾಟ್ ಕಮಿನ್ಸ್ (3) ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.
ಪರಿಣಾಮ ಕೊನೆಯ 2 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 33 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಆ್ಯಡಂ ಝಂಪಾ ಫೋರ್ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಅದರಂತೆ ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 24 ರನ್ ಬೇಕಿದ್ದರೆ, ಅಫ್ಘಾನಿಸ್ತಾನ್ ತಂಡಕ್ಕೆ 1 ವಿಕೆಟ್ನ ಅವಶ್ಯಕತೆಯಿತ್ತು.
ಅಂತಿಮ ಓವರ್ನ 2ನೇ ಎಸೆತದಲ್ಲಿ ಆ್ಯಡಂ ಝಂಪಾ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡುವ ಮೂಲಕ ಆಸ್ಟ್ರೇಲಿಯಾ ತಂಡ 19.2 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ್ ತಂಡ 21 ರನ್ಗಳ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಅಫ್ಘಾನಿಸ್ತಾನ್ ಪರ 4 ಓವರ್ಗಳಲ್ಲಿ 20 ರನ್ ನೀಡಿ ಗುಲ್ಬದ್ದಿನ್ ನೈಬ್ 4 ವಿಕೆಟ್ ಪಡೆದು ಮಿಂಚಿದರೆ, ನವೀನ್ ಉಲ್ ಹಕ್ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಚೊಚ್ಚಲ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.