T20 World Cup: ಆಂಗ್ಲರ ವಿರುದ್ಧಭಾರತಕ್ಕೆ ಭರ್ಜರಿ ಜಯ; ಫೈನಲ್ಗೇರಿದ ಭಾರತ.
T20 World Cup: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೆ ಪ್ರವೇಶ ಪಡೆದಿದೆ. ಮೊದಲ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ್ ತಂಡದ ವಿರುದ್ದ ಅಮೋಘ ಗೆಲುವು ಸಾಧಿಸಿ ಸೌತ್ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶ ಪಡೆದಿದೆ.
ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. 172 ರನ್‌ಗಳ ಗುರಿ ಬೆನ್ನತ್ತಿದ ಆಂಗ್ಲರ ಪಡೆ 16.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 103 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟೀಂ ಇಂಡಿಯಾ 19 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ 9 ರನ್ ಗಳಿಸಿ ಔಟಾದರು. ಆ ಬಳಿಕ ರಿಷಬ್ ಪಂತ್ ಕೂಡ 4 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾ ಮೊದಲ 6 ಓವರ್‌ಗಳಲ್ಲಿ 40 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಆದರೆ ಆ ನಂತರ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಟೀಮ್ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದಲ್ಲದೆ, ಈ ಇಬ್ಬರೂ 73 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
ರೋಹಿತ್ 57 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದರೆ, ಸೂರ್ಯಕುಮಾರ್ 47 ರನ್‌ಗಳ ಕಾಣಿಕೆ ನೀಡಿದರು. ನಂತರ ರವೀಂದ್ರ ಜಡೇಜಾ ಔಟಾಗದೆ 17 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 23 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಬಾರಿಸಿದರೆ, ಅರ್ಷದೀಪ್ ಸಿಂಗ್ ಅಜೇಯ 1 ರನ್‌ಗಳ ಕಾಣಿಕೆ ನೀಡಿದರು. ಇಂಗ್ಲೆಂಡ್ ಪರ ಬೌಲ್ ಮಾಡಿದ 6 ಬೌಲರ್ಗಳ ಪೈಕಿ ನಾಲ್ವರು ತಲಾ 1 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡಾನ್ ಅತಿ ಹೆಚ್ಚು 3 ವಿಕೆಟ್ ಪಡೆದರು.
ಗೆಲುವಿಗೆ 171 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೆ ಮೊದಲ ವಿಕೆಟ್ಗೆ 26 ರನ್‌ಗಳ ಜೊತೆಯಾಟ ಸಿಕ್ಕಿತು. ಆದರೆ ನಾಯಕ ಜೋಸ್ ಬಟ್ಲರ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು.
ಆಂಗ್ಲ ತಂಡದ ಪರ ಹ್ಯಾರಿ ಬ್ರೂಕ್ 25 ರನ್ ಬಾರಿಸಿ ಅಗ್ರ ಸ್ಕೋರರ್ ಎನಿಸಿಕೊಂಡರೆ, ಜೋಸ್ ಬಟ್ಲರ್ 23 ರನ್‌ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ವೇಗಿ ಜೋಫ್ರಾ ಆರ್ಚರ್ 21 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಯಾವೊಬ್ಬ ಬ್ಯಾಟರ್ ಕೂಡ ಒಂದಂಕಿ ದಾಟಲಿಲ್ಲ. ಭಾರತದ ಪರ ಕುಲ್ದೀಪ್ ಯಾದವ್ 19 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 23 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಅವರ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.