T20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವಾಗಲೇ ಜಿಂಬಾಬ್ವೆ ಎದುರು ಹೀನಾಯವಾಗಿ ಸೋತ ಭಾರತ
T20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವಾಗಲೇ ಜಿಂಬಾಬ್ವೆ ಎದುರು ಹೀನಾಯ ಸೋಲು ಕಂಡಿದೆ. ಚಾಂಪಿಯನ್ ತಂಡದ ಎದುರು ಗೆದ್ದು ಸಂಭ್ರಮಿಸುತಿದೆ ಜಿಂಬಾಬ್ವೆ ತಂಡ.
ಹರಾರೆ: ಶುಭ್‌ಮನ್ ಗಿಲ್ ನೇತೃತ್ವದಲ್ಲಿ ಹರಾರೆಗೆ ಪ್ರಯಾಣ ಮಾಡಿದ್ದ ಟೀಮ್ ಇಂಡಿಯಾ ತಂಡ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಅಚ್ಚರಿಯ ಸೋಲು ಕಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಿ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಶಕ್ತವಾಯಿತು
ಜಿಂಬಾಬ್ವೆ ಪರ ಕ್ಲೈವ್ ಮದಾಂಡೆ ಅಜೇಯ 29 ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಕೊಡುಗೆ ನೀಡಿದರು. ಉಳಿದಂತೆ ಡಿಯೋನ್ ಮೈಯರ್ಸ್ 23 ರನ್ ಕೊಡುಗೆ ನೀಡಿದರೆ, ಬ್ರಿಯಾನ್ ಜಾನ್ ಬೆನೆಟ್ ಕೂಡ 15 ಎಸೆತಗಳಲ್ಲಿ 22 ರನ್ ಬಾರಿಸಿದರು. ಮತ್ತೊಂದೆಡೆ ರವಿ ಬಿಷ್ಣೋಯ್ ಟೀಂ ಇಂಡಿಯಾ ಪರ ಗರಿಷ್ಠ 4 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ ಹಾಗೂ ಮುಖೇಶ್ ಕುಮಾರ್, ಅವೇಶ್ ಖಾನ್ ತಲಾ 1 ವಿಕೆಟ್ ಪಡೆದರು.
ಟೀಂ ಇಂಡಿಯಾದ ಬ್ಯಾಟಿಂಗ್ ಆರಂಭದಿಂದಲೇ ಕಳಪೆಯಾಗಿತ್ತು. ಪವರ್ ಪ್ಲೇನಲ್ಲಿಯೇ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು. ಹೀಗಾಗಿ ತಂಡದ ಈ ಆರಂಭಿಕ ಆಘಾತದಿಂದ ಯಾವುದೇ ಬ್ಯಾಟ್ಸ್‌ಮನ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ 116 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 102 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ನಾಯಕ ಶುಭ್‌ಮನ್ ಗಿಲ್ ಗರಿಷ್ಠ 31 ರನ್ ಬಾರಿಸಿದರು.
ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 27 ರನ್ ಹಾಗೂ ಆವೇಶ್ ಖಾನ್ 16 ರನ್ ಬಾರಿಸಿ ತಂಡವನ್ನು ಮುಜುರದ ಸೋಲಿನಿಂದ ಪಾರು ಮಾಡಿದರು. ಇವರ ಹೊರತಾಗಿ ತಂಡದ ಯಾವುದೇ ಬ್ಯಾಟ್ಸ್ಮನ್ಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಜಿಂಬಾಬ್ವೆ ವಿರುದ್ಧ ಮೂರನೇ ಸೋಲು ಅನುಭವಿಸಿತು.
ಈ ಮೂಲಕ ಆತಿಥೇಯ ಜಿಂಬಾಬ್ವೆ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿಗೆ ಐಪಿಎಲ್ ಸ್ಟಾರ್ಗಳ ಅತಿಯಾದ ಆತ್ಮವಿಶ್ವಾಸವೇ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ತವರು ಪಿಚ್ನಲ್ಲಿ ಜಿಂಬಾಬ್ವೆ ತಂಡದ ಬೌಲಿಂಗ್ ದಾಳಿಯನ್ನು ಕಡೆಗಣಿಸಿದ ಭಾರತದ ಬ್ಯಾಟರ್ಗಳು ಬಂದಬಂದವರೇ ಬಿಗ್ ಶಾಟ್ ಆಡಲು ಯತ್ನಿಸಿ ಸುಲಭವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಆವೇಶ್ ಖಾನ್ ಗೆಲುವಿಗಾಗಿ ಹೋರಾಟ ನೀಡದಿದ್ದರೆ, ಶುಭ್‌ಮನ್ ಗಿಲ್ ಪಡೆ ಇನ್ನು ಹೀನಾಯವಾಗಿ ಸೋಲುತಿತ್ತು.
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಅವರು ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
ಇದರೊಂದಿಗೆ ಭಾರತ ತಂಡದ ಸತತ 12 ಪಂದ್ಯಗಳ ಗೆಲುವಿನ ದಾಖಲೆ ಈ ಸೋಲಿನೊಂದಿಗೆ ಅಂತ್ಯಗೊಂಡಂತಾಗಿದೆ.
ಈ ಪಂದ್ಯದಲ್ಲಿ ನಾವು ಚೆನ್ನಾಗಿ ಬಾಲಿಂಗ್ ಮಾಡಿದ್ದೇವೆ. ಆದರೆ ನಮ್ಮ ಬ್ಯಾಟಿಂಗ್ ನಲ್ಲಿ ಗುಣಮಟ್ಟವಿರಲಿಲ್ಲ, ಮೊದಲ ಐದು ವಿಕೆಟ್ಗಳನ್ನು ಅತ್ಯಂತ ಶೀಘ್ರದಲ್ಲಿ ಕಳೆದುಕೊಂಡೆವು. ಈ ಪಂದ್ಯಾಟದಲ್ಲಿ ಮಾಡಿದಂತ ತಪ್ಪು ಮುಂದಿನ ಪಂದ್ಯಗಳಲ್ಲಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಪಂದ್ಯದ ನಂತರ ಶುಭಮನ್ ಗಿಲ್ ಹೇಳಿದರು.
ಸಿಕಂದರ್ ರಜಾ ‘ಪಂದ್ಯದ ಆಟಗಾರ’:
ಸಿಕಂದರ್ ರಜಾ ‘ಪಂದ್ಯದ ಆಟಗಾರ’ ಎನಿಸಿಕೊಂಡರು.
“ಗೆಲುವಿನ ಬಗ್ಗೆ ನಿಜವಾಗಿಯೂ ಸಂತೋಷವಾಗಿದೆ. ಕೆಲಸ ಮುಗಿದಿಲ್ಲ, ಸರಣಿ ಮುಗಿದಿಲ್ಲ. ವಿಶ್ವ ಚಾಂಪಿಯನ್‌ಗಳು ವಿಶ್ವ ಚಾಂಪಿಯನ್‌ಗಳಂತೆ ಆಡುತ್ತಾರೆ ಆದ್ದರಿಂದ ನಾವು ಮುಂದಿನ ಪಂದ್ಯಕ್ಕೆ ಸಿದ್ಧರಾಗಿರಬೇಕು. ಇದು ನೀವು 115 ರನ್‌ಗಳಿಗೆ ಬೌಲ್ಡ್ ಆಗುವ ವಿಕೆಟ್ ಅಲ್ಲ. ಎರಡೂ ಕಡೆಯ ಬೌಲರ್‌ಗಳಿಗೆ ಕ್ರೆಡಿಟ್. ನಾವು ನಮ್ಮ ಯೋಜನೆಗಳನ್ನು ಹೊಂದಿದ್ದೇವೆ, ನಾವು ಅದಕ್ಕೆ ಅಂಟಿಕೊಂಡಿದ್ದೇವೆ ಮತ್ತು ನಾವು ನಮ್ಮ ಹುಡುಗರಿಗೆ ಬೆಂಬಲ ನೀಡುತ್ತೇವೆ.
ನಮ್ಮ ಕ್ಯಾಚಿಂಗ್ ಮತ್ತು ಗ್ರೌಂಡ್ ಫೀಲ್ಡಿಂಗ್ ಅದ್ಭುತವಾಗಿತ್ತು ಆದರೆ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ, ಸುಧಾರಣೆಗೆ ಅವಕಾಶವಿದೆ ಎಂದು ತೋರಿಸುತ್ತದೆ. ಅಭಿಮಾನಿಗಳು ನಮ್ಮನ್ನು ಮೇಲಕ್ಕೆತ್ತುತ್ತಾರೆ ಮತ್ತು ನಮಗೆ ಶಕ್ತಿಯನ್ನು ನೀಡುತ್ತಾರೆ, ಅವರಿಗೆ ಮನ್ನಣೆ ನೀಡುತ್ತಾರೆ ಎಂದು ನಮಗೆ ತಿಳಿದಿತ್ತು, ಅದು ನಮಗೆ ಸಹಾಯ ಮಾಡಿತು ಎಂದು ಪಂದ್ಯದ ನಂತರ ಸಿಕಂದರ್ ರಜಾ ಹೇಳಿದರು.
ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.
ಜಿಂಬಾಬ್ವೆ ತಂಡ: ತಡಿವಾನಾಶೆ ಮರುಮಣಿ, ಇನೋಸೆಂಟ್ ಕಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮಡ್ನಾಡೆ (ವಿಕೆಟ್ ಕೀಪರ್), ವೆಸ್ಲಿ ಮಾಧೆವೆರೆ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಬಾನಿ, ತೆಂಡೈ ಚಟಾರಾ.