ಸ್ವಾಮಿಜಿ ಸಿಗಲಿ ಗೊತ್ತಾಗುತ್ತೆ ; ದೊಡ್ಡ ದೊಡ್ಡವರ ಹೆಸರು ಬಹಿರಂಗವಾಗತ್ತೆ- ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ
ಬೆಂಗಳೂರು: ಕರಾವಳಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಹಿಂದೂಪರ ನಾಯಕಿ ಚೈತ್ರಾ ಕುಂದಾಪುರ ಅವರ ವಿಚಾರಣೆ ಇಂದು ಗುರುವಾರದಿಂದ ಆರಂಭವಾಗಲಿದೆ.
ನಿನ್ನೆ ಬಂಧನಕ್ಕೊಳಗಾದ ಅವರನ್ನು ರಾತ್ರಿ ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಸಿಸಿಬಿ ಎಸಿಪಿ ರೀನಾ ಸುವರ್ಣ ಅವರಿಂದ ವಿಚಾರಣೆ ನಡೆಯಲಿದೆ. ಬಳಿಕ ಹಣ ಪಡೆದ ಸ್ಥಳಗಳಲ್ಲಿ ಮಹಜರು ಮಾಡಲಿದ್ದಾರೆ. ಚೈತ್ರಾ ಕುಂದಾಪುರ ಅವರ ಜೊತೆಗೆ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ವಿಚಾರಣೆ ನಡೆಸಲಾಗುತ್ತದೆ.
ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಇನ್ನೂ ದೊಡ್ಡ ದೊಡ್ಡ ಹೆಸರು ಹೊರಗೆ ಬರುತ್ತದೆ-ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಬಂಧನದಲ್ಲಿರುವ ಚೈತ್ರಾ ಕುಂದಾಪುರರನ್ನು ಪೊಲೀಸ್ ಜೀಪಿನಲ್ಲಿ ಇಂದು ಸಿಸಿಬಿ ಪೊಲೀಸರು ಕರೆತಂದಾಗ ಜೀಪಿನಿಂದ ಇಳಿಯುತ್ತಲೇ ಮಾಧ್ಯಮ ಪ್ರತಿನಿಧಿಗಳನ್ನು ಕಂಡಾಗ, ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೊದಲು ಈ ಪ್ರಕರಣದಲ್ಲಿ ಸ್ವಾಮೀಜಿಗಳು ಸಿಕ್ಕಿ ಹಾಕಿಕೊಳ್ಳಲಿ. ಎಲ್ಲಾ ಸತ್ಯ ಗೊತ್ತಾಗುತ್ತೆ ಸರ್. ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಡ್ಡಿಂಗ್ ಇರೋ ಕಾರಣ ಈ ಷಡ್ಯಂತ್ರ ರಚನೆಯಾಗಿದೆ. ಎ1 ಆರೋಪಿ ನಾನೇ ಆಗಿರಬಹುದು. ಸ್ವಾಮೀಜಿ ಸಿಕ್ಕ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳುತ್ತಾ ಚೈತ್ರಾ ಪೊಲೀಸ್ ಕಚೇರಿ ಒಳಗೆ ಹೋಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹಡಗಲಿಯ ಹಾಲಶ್ರೀ ಸ್ವಾಮೀಜಿಗೆ ಪ್ರಧಾನಿ ಕಚೇರಿಯ ಸಂಪರ್ಕವಿದೆ ಎಂದು ಗೋವಿಂದ ಬಾಬು ಪೂಜಾರಿ ಅವರಿಂದ ಒಂದೂವರೆ ಕೋಟಿ ಹಣ ಹಾಕಿಸಲಾಗಿದೆ. ಗೋವಿಂದ ಪೂಜಾರಿ ಜೊತೆಯಲ್ಲಿ ಚೈತ್ರಾ ಸಹ ಹಡಗಲಿಗೆ ತೆರಳಿ ಸ್ವಾಮೀಜಿಯನ್ನು ಭೇಟಿಯಾಗಿರುವ ಮಾಹಿತಿಯಿದೆ.
ಬೆಂಗಳೂರಿನ ಆರ್‌ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ; ಭ್ರಷ್ಟಾಚಾರ ಆರೋಪ ಕುರಿತು ತನಿಖೆ
ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸ್ ಮತ್ತು ನ್ಯಾಯಾಂಗ ವಿಭಾಗಗಳನ್ನೊಳಗೊಂಡ ತಂಡಗಳು ಬುಧವಾರ ಬೆಂಗಳೂರಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳ ಮೇಲೆ (ಆರ್‌ಟಿಒ) ಏಕಕಾಲದಲ್ಲಿ ದಿಢೀರ್ ದಾಳಿ ನಡೆದಿದೆ. ಆರ್‌ಟಿಒಗಳಲ್ಲಿ ಅಕ್ರಮಗಳು ಮತ್ತು ವ್ಯಾಪಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಬಂದಿದ್ದರಿಂದ ಈ ಭಾರಿ ಅನಿರೀಕ್ಷಿತವಾಗಿ ದಾಳಿ ನಡೆಸಲಾಯಿತು.
ಜಯನಗರ ಮತ್ತು ರಾಜಾಜಿನಗರದ ಆರ್‌ಟಿಒಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಮತ್ತು ಯಲಹಂಕ ಮತ್ತು ಯಶವಂತಪುರದಲ್ಲಿನ ಆರ್‌ಟಿಒಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆಎನ್ ಫಣೀಂದ್ರ ಭೇಟಿ ನೀಡಿದರು.ಲೋಕಾಯುಕ್ತ ಪೊಲೀಸರಿಗೆ ಸಾರ್ವಜನಿಕರಿಂದ ಆರ್‌ಟಿಒಗಳಲ್ಲಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಲವಾರು ದೂರುಗಳು ಬಂದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡ್ರೈವಿಂಗ್ ಲೈಸೆನ್ಸ್ ಮತ್ತು ಪರ್ಮಿಟ್ ನೀಡಲು ಬಂದಿರುವ ಅರ್ಜಿಗಳ ಸಂಖ್ಯೆ, ಬಾಕಿ ಇರುವ ಅರ್ಜಿಗಳು ಮತ್ತು ಕಾರಣಗಳು, ಯಾವುದೇ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುವುದು, ಏಜೆಂಟ್ ಗಳ ಹಾವಳಿ ಮತ್ತಿತರ ಅಕ್ರಮ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುವ ಮೂಲಕ ಆರೋಪ ನಿಜವೆಂದು ದೃಢಪಡಿಸಿದ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರ್‌ಟಿಒಗಳಲ್ಲಿ ದೋಷಾರೋಪಣೆ ದಾಖಲೆಗಳನ್ನು ಶೋಧಿಸಿ ವಶಪಡಿಸಿಕೊಳ್ಳಲು ವಾರಂಟ್ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿರುವ 12 ಆರ್‌ಟಿಒಗಳ ಮೇಲಿನ ದಾಳಿಗಾಗಿ ಲೋಕಾಯುಕ್ತರು 10 ತಂಡಗಳನ್ನು ರಚಿಸಿದ್ದಾಗಿ ಮೂಲಗಳು ತಿಳಿಸಿವೆ. ಆರ್‌ಟಿಒಗಳೊಂದಿಗೆ ವ್ಯವಹರಿಸುವ ಖಾಸಗಿ ಏಜೆಂಟರ ಕಚೇರಿಗೂ ತಂಡವೊಂದು ಭೇಟಿ ನೀಡಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ.