ಸೂರು ಕಲ್ಪಿಸಲು ವಸತಿ ಸಚಿವ ಜಮೀರ್ ಅಹಮ್ಮದ್ ಮುಂದೆ ಕಣ್ಣೀರು ಹಾಕಿದ ಗುಡಿಸಲು ವಾಸಿಗಳು!
ಬೆಂಗಳೂರು: ಸೂರು ಕಲ್ಪಿಸಲು ವಸತಿ ಸಚಿವರ ಮುಂದೆ ಮಹಿಳೆಯರು ಕಣ್ಣೀರು ಹಾಕಿದ ಘಟನೆ ಹೆಬ್ಬಾಳದ ಕುಂತಿ ನಗರದಲ್ಲಿ ನಡೆದಿದೆ.
ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಅಧಿಕಾರಿಗಳ ಜೊತೆ ಭೇಟಿ ನೀಡಿದಾಗ ಕೈಮುಗಿದು ಗೋಗರೆದ ಹಿರಿಯ ನಾಗರಿಕರು, ಶೆಡ್ ಗಳಲ್ಲಿ ಇಲಿ -ಹೆಗ್ಗಣ ಕಾಟದ ನಡುವೆ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ ಎಂದು ಅಲವತ್ತುಕೊಂಡರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂಪಿಸಿರುವ ಪ್ರಧಾನ ಮಂತ್ರಿ ಅವಾಸ್ ವಸತಿ ಯೋಜನೆ ಎರಡು ವರ್ಷ ಆದರೂ ಪೂರ್ಣಗೊಂಡಿಲ್ಲ. ಗುಣಮಟ್ಟದ ಮನೆ ಕಟ್ಟಿಕೊಡುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಜೀವನ ನಡೆಸಲು ಊಟ ತಿಂಡಿಗೆ ಕಷ್ಟ ಆಗುತ್ತಿದೆ. ಫಲಾನುಭವಿ ವಂತಿಗೆ ಮೂರೂವರೆಯಿಂದ ನಾಲ್ಕು ಲಕ್ಷದವರೆಗೆ ಪಾವತಿ ಮಾಡಲು ಆಗುತ್ತಿಲ್ಲ. ನಮಗೆ ದಯವಿಟ್ಟು ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿಕೊಂಡರು.
ಸ್ಥಳೀಯ ವಾಸಿಗಳಾದ ನೇತ್ರ, ಅಣ್ಣಿ ಯಮ್ಮ, ಮುತ್ಯಾ ಲಮ್ಮ, ವೆಂಕಟೇಶ್ ಅವರು ನಮ್ಮ ಜೀವನ ರಸ್ತೆಗೆ ಬಂದಿದೆ. ಮಕ್ಕಳಿಗೆ ವಿದ್ಯೆ ಕಲಿಸಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆ ಎಂದರೆ ಚಿಕಿತ್ಸೆ ಗೆ ಹಣ ಇಲ್ಲದಂತಾಗಿದೆ ಎಂದು ಕಣ್ಣೀರು ಹಾಕಿದರು. ಪೇಪರ್ ಹಾಕುವುದು, ಮನೆ ಕೆಲಸ, ರಸ್ತೆ ಬದಿ ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದರು. ಸಚಿವರು ಇದೇ ವೇಳೆ ಸರ್ವಜ್ಞ ಕ್ಷೇತ್ರದ ಚಟ್ಟಪ್ಪ ಗಾರ್ಡನ್, ಬಸವ ನ ಗುಡಿಯ ಚಾಮುಂಡಿ ನಗರ ಕೊಳೆಗೇರಿ ಗೂ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಉಪಸ್ಥಿತರಿದ್ದರು.
ಕುಂತಿ ನಗರ ಕೊಳೆಗೇರಿಯಲ್ಲಿ 402 ಮನೆ 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರತಿ ಮನೆಗೆ 7 ಲಕ್ಷ ರೂ. ವೆಚ್ಚ ಆಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಸ್ ಸಿ ಎಸ್ ಟಿ ವರ್ಗಕ್ಕೆ 3.50 ಲಕ್ಷ ರೂ., ಸಾಮಾನ್ಯ ವರ್ಗಕ್ಕೆ 2.70 ಲಕ್ಷ ರೂ. ಸಬ್ಸಿಡಿ ಸಿಗುತ್ತಿದ್ದು ಉಳಿದದ್ದು ಫಲಾನುಭವಿ ಕಟ್ಟಬೇಕು. ಆದರೆ ವಂತಿಗೆ ಪಾವತಿ ಆಗದೆ ಮನೆ ಅರ್ಧ ಕ್ಕೆ ನಿಂತಿವೆ.
ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್
ಮಂಗಳೂರು: ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ (U.T Khader) ಪ್ರತಿಕ್ರಿಯಿಸಿದ್ದಾರೆ.
ಧರ್ಮಗಳ ಬಗ್ಗೆ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ, ಗೌರವವಿದೆ. ಎಲ್ಲಾ ಧರ್ಮವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ತಿಳಿಸುತ್ತದೆ. ಇದನ್ನು ಹೊರತುಪಡಿಸಿ ದ್ವೇಷವನ್ನು ಎಲ್ಲಿಯೂ ತಿಳಿಸುವುದಿಲ್ಲ. ಎಲ್ಲಾ ಧರ್ಮಗಳು ಸಮಾಜವನ್ನು ಒಗ್ಗಟ್ಟು ಮಾಡುವ ಸಂದೇಶ ಕೊಡುತ್ತೆ. ಬಿಕ್ಕಟ್ಟು ಮಾಡುವ ಸಂದೇಶ ಯಾವ ಧರ್ಮವೂ ನೀಡಲ್ಲ ಎಂದರು.
ಮಾನವೀಯತೆ, ಕರುಣೆ, ಪ್ರೀತಿ ವಿಶ್ವಾಸ, ಸಹೋದರತೆ, ಕ್ಷಮೆ ಇದಕ್ಕೆ ಸೀಮಿತವಾಗಿರಬೇಕು. ನೆಮ್ಮದಿಯ ಜೀವನ ನಡೆಸುವ ಅವಕಾಶ ಎಲ್ಲಾ ಧರ್ಮ ಕೊಡುತ್ತೆ. ಯಾರು ಏನು ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ನಾವು ನಮ್ಮ ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ ಇನ್ನಿತರ ಧರ್ಮವನ್ನು ಗೌರವಿಸಬೇಕು ಎಂದು ಖಾದರ್ ತಿಳಿಸಿದರು.
ಸರ್ವ ಜನರ ಪ್ರೀತಿಗೆ ಪಾತ್ರರಾಗಿ ದೇವರ ಪ್ರೀತಿಗೆ ಪಾತ್ರರಾಗಬೇಕು. ಒಂದಿಬ್ಬರು ಹೇಳುವ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ಒಗ್ಗಟ್ಟಿನ ಸಮಾಜ ನಿರ್ಮಾಣ ಆಗಬೇಕು ಎಂದು ಹೇಳಿದರು.