ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದು ದಾರುಣ ಸಾವು!
ತಿರುವನಂತಪುರಂ: ಗಾಢ ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದ ಪರಿಣಾಮ ಆತ ದುರ್ಮರಣಕ್ಕೀಡಾದ ಘಟನೆ ಕೇರಳದ (Kerala) ಕೋಯಿಕ್ಕೋಡ್‍ನಲ್ಲಿ ನಡೆದಿದೆ.
ಮೃತನನ್ನು ಜೆಫಿನ್ ಸಂದೀಪ್ (2) ಎಂದು ಗುರುತಿಸಲಾಗಿದೆ. ಈತ ಸಂದೀಪ್ ಹಾಗೂ ಜಿನ್ಸಿ ದಂಪತಿಯ ಪುತ್ರ. ಈ ಘಟನೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.
ಬಾಲಕ ಮಲಗಿ ಗಾಢ ನಿದ್ದೆಯಲಿದ್ದ ಸಂದರ್ಭದಲ್ಲಿ ರ್ಯಾಕ್‍ನಲ್ಲಿಟ್ಟ ಬೆಡ್ ಆತನ ಮೈಮೇಲೆ ಬಿದ್ದಿದೆ. ಇತ್ತ ಬೆಡ್ ಬಾಲಕನ ಮೇಲೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಘಟನೆ ನಡೆದ ಸಂದರ್ಭದಲ್ಲಿ ಜೆಫಿನ್ ಹಾಗೂ ಆತನ ತಾಯಿ ಇಬ್ಬರೇ ಮನೆಯೊಳಗಡೆ ಇದ್ದರು. ಜೆಫಿನ್ ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕೆಲಸವೊಂದರ ನಿಮಿತ್ತ ಅವರು ಹೊರಗಡೆ ಹೋಗಿದ್ದರು ಎಂಬುದಾಗಿ ವರದಿಯಾಗಿದೆ.
ರಾಷ್ಟ್ರಪತಿ ಆಯೋಜಿಸಿರುವ ಜಿ20 ಔತಣಕೂಟಕ್ಕೆ ಖರ್ಗೆಗಿಲ್ಲ ಆಹ್ವಾನ
ನವದೆಹಲಿ: ನವದೆಹಲಿಯಲ್ಲಿ ಶನಿವಾರ ನಡೆಯಲಿರುವ ಜಿ20 ಶೃಂಗಸಭೆಯ (G20 Summit) ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ (Manmohan Singh) ಮತ್ತು ಹೆಚ್.ಡಿ ದೇವೇಗೌಡರನ್ನು (H.D.Devegowda) ಆಹ್ವಾನಿಸಲಾಗಿದೆ ಆದರೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿಲ್ಲ.
ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆಯಲಿರುವ 18 ನೇ G20 ನಾಯಕರ ಶೃಂಗಸಭೆಯು ಭಾರತವು ಇದುವರೆಗೆ ಆಯೋಜಿಸಿದ ಅತ್ಯಂತ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ಒಂದಾಗಿದೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡಿನ ಎಂಕೆ ಸ್ಟಾಲಿನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಜಾರ್ಖಂಡ್‌ನ ಹೇಮಂತ್ ಸೊರೆನ್, ಪಂಜಾಬ್‌ನ ಭಗವಂತ್ ಮಾನ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಐಎನ್‌ಡಿಐಎ ಬಣದ ಇತರ ಮುಖ್ಯಮಂತ್ರಿಗಳೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ20 ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.
ಆದರೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿ20 ಔತಣಕೂಟಕ್ಕೆ ಆಹ್ವಾನಿಸಿಲ್ಲ ಎಂದು ಅವರ ಕಚೇರಿ ಖಚಿತಪಡಿಸಿದೆ. ಖರ್ಗೆ ಅವರು ಕ್ಯಾಬಿನೆಟ್ ಮಂತ್ರಿ ದರ್ಜೆಯನ್ನು ಹೊಂದಿದ್ದಾರೆ. ದೇಶದ ಅತಿದೊಡ್ಡ ವಿರೋಧ ಪಕ್ಷದ ಅಧ್ಯಕ್ಷರೂ ಆಗಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ವಿದೇಶಿ ನಾಯಕರಿಗೆ ಜಿ20 ಆಹ್ವಾನಗಳಲ್ಲಿ “ಇಂಡಿಯಾ” ಬದಲಿಗೆ “ಭಾರತ್” ಎಂದು ಬಳಸಿದ್ದು ದೊಡ್ಡ ವಿವಾದ ಹುಟ್ಟುಹಾಕಿತು. ಮೊದಲ ಬಾರಿಗೆ, ಸಾಂಪ್ರದಾಯಿಕವಾಗಿದ್ದ “ಪ್ರೆಸಿಡೆಂಟ್ ಆಫ್ ಇಂಡಿಯಾ” ಬದಲಿಗೆ “ಪ್ರೆಸಿಡೆಂಟ್ ಆಫ್ ಭಾರತ್” ಎಂದು ಉಲ್ಲೇಖಿಸಿ ಜಿ20 ನಾಯಕರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ವಿಶ್ವ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪ್ರಧಾನಿ ರಿಷಿ ಸುನಕ್, ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ನವದೆಹಲಿಯಲ್ಲಿ ಕೂಟದ ಭಾಗವಾಗುವ ನಿರೀಕ್ಷೆಯಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಬ್ಬರೂ ವಾರಾಂತ್ಯದ ಶೃಂಗಸಭೆಯಿಂದ ಹಿಂದೆ ಸರಿದಿದ್ದಾರೆ.