ಕಾಂಗ್ರೆಸ್ ಗೆ ರಿಲೀಫ್ ನೀಡಿದ ಸುಪ್ರೀಂ ;3500 ಕೋಟಿ ರೂ. ತೆರಿಗೆ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಇಲ್ಲ.!
ನವದೆಹಲಿ: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 3,500 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೀಡಲಾಗಿದ್ದ ನೋಟಿಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದರಿಂದ ಕಾಂಗ್ರೆಸ್ ಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಆದಾಯ ತೆರಿಗೆ ಇಲಾಖೆ ಕಳುಹಿಸಿದ್ದ ನೋಟಿಸ್ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ, ಐಟಿ ಇಲಾಖೆಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಈ ವಿಷಯದ ಅಂತಿಮ ತೀರ್ಪಿನವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಮೆಹ್ತಾ ತಿಳಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾನು ಈ ವಿಷಯದಲ್ಲಿ ಹೇಳಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿದ್ದು, ಚುನಾವಣೆ ನಡೆಯುತ್ತಿರುವುದರಿಂದ ನಾವು ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಆದಾಯ ತೆರಿಗೆ ಇಲಾಖೆಯ ಈ ಕ್ರಮವನ್ನು ಶ್ಲಾಘಿಸಿದರು ಮತ್ತು ಇದು “ಖುಷಿಯ ಸಂಗತಿ” ಎಂದಿದ್ದಾರೆ. ಮಾರ್ಚ್‌ನಲ್ಲಿ ಮತ್ತು ಅದಕ್ಕೂ ಮೊದಲು ವಿವಿಧ ವರ್ಷಗಳಿಂದ ಸುಮಾರು 3,500 ಕೋಟಿ ರೂ.ಗೆ ಸಂಬಂಧಿಸಿದಂತೆ ಎಲ್ಲಾ ನೋಟಿಸ್‌ಗಳನ್ನು ನೀಡಲಾಗಿದೆ. ಕಾಂಗ್ರೆಸ್, ಮಾರ್ಚ್ 29 ರಂದು ಐಟಿ ಇಲಾಖೆಯಿಂದ 1,823 ಕೋಟಿ ರೂ. ಪಾವತಿಸಬೇಕು ಎಂಬ ನೋಟಿಸ್ ಅನ್ನು ಸ್ವೀಕರಿಸಿದೆ ಎಂದು ಸಿಂಘ್ವಿ ಹೇಳಿದ್ದಾರೆ.
ಸುಮಾರು 1,823 ಕೋಟಿ ರೂಪಾಯಿ ಪಾವತಿಸುವಂತೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ಶುಕ್ರವಾರ ಕಾಂಗ್ರೆಸ್ ಹೇಳಿತ್ತು. ಹಿಂದಿನ ವರ್ಷಗಳಿಗೆ ಸಂಬಂಧಿಸಿದ ತೆರಿಗೆ ಪಾವತಿಗಾಗಿ ತೆರಿಗೆ ಅಧಿಕಾರಿಗಳು ಈಗಾಗಲೇ ಪಕ್ಷದ ಖಾತೆಗಳಿಂದ 135 ಕೋಟಿ ರೂ.ಗಳನ್ನು ವಿತ್ ಡ್ರಾ ಮಾಡಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿತ್ತು.