ಸುಮಲತಾ ಅಂಬರೀಷ್ ರಾಜಕೀಯ ಭವಿಷ್ಯ ಅತಂತ್ರ; ತುರ್ತು ಸಭೆ ಕರೆದ ಸುಮಲತಾ..!
ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಿದೆ. ಮಂಡ್ಯ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಈ ಮಧ್ಯೆ ಅವರು ಕಾರ್ಯಕರ್ತರ ತುರ್ತು ಸಭೆ ಕರೆದಿದ್ದಾರೆ. ಬೆಂಬಲಿಗರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.
ಬಿಜೆಪಿಯ ಮಂಡ್ಯ ಕ್ಷೇತ್ರದ ಟಿಕೆಟ್ ನನಗೆ ಸಿಗಲಿದೆ ಎಂದುಕೊಂಡಿದ್ದ ಸುಮಲತಾ ಅವರಿಗೆ ಮಂಡ್ಯದ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಮಂಡ್ಯ ಕ್ಷೇತ್ರ ಪಡೆದ ಜೆಡಿಎಸ್ ಟಿಕೆಟ್ ಘೋಷಣೆಗಾಗಿ ಚನ್ನಪಟ್ಟಣದಲ್ಲಿ ಸಭೆ ನಡೆಸುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.
ಚನ್ನಪಟ್ಟಣ ತೊರೆದು ಹೋಗದಂತೆ ಕುಮಾರಸ್ವಾಮಿಯವರಿಗೆ ಬೆಂಬಲಿಗರ ತೀವ್ರ ಒತ್ತಡ ಹೇರಿರುವುದರಿಂದ ಜೆಡಿಎಸ್ ವರಿಷ್ಠರು ಕೂಡ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಇಂದಿನ ಸಭೆಯಲ್ಲಿ ಸುಮಲತಾ ಅವರ ಮುಂದಿನ ನಡೆ ನಿರ್ಧಾರವಾಗಲಿದೆ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಒಪ್ಪಿದರೆ ಅವರು ಮಂಡ್ಯದಿಂದ ಜೆಡಿಎಸ್ ಕಣಕ್ಕಿಳಿಸುವ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರಾ, ಅಥವಾ ಅವರು ಈ ಹಿಂದೆ ಹೇಳುತ್ತಿದ್ದಂತೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಎಂಬ ಸಂದೇಹ ಮೂಡಿದೆ.
ಸುಮಲತಾ ಅಕ್ಕ ತಾಳ್ಮೆಯಿಂದರಬೇಕೆಂದ ಆಪ್ತ ಸಚ್ಚಿದಾನಂದ!
ಬೆಂಗಳೂರು: ಅಂಬರೀಶ್ ಅಣ್ಣ ಅವರ ಅಭಿಮಾನಿ ಆಗಿ ಹೇಳುತ್ತೇನೆ. ಸಂಸದೆ ಸುಮಲತಾ (Sumalatha Ambareesh) ಅಕ್ಕನಿಗೆ ಭವಿಷ್ಯ ಇದೆ. ಅವರು ತಾಳ್ಮೆಯಿಂದ ಇರಬೇಕು ಎಂದು ಆಪ್ತ, ಸುಮಲತಾ ಬೆಂಬಲಿಗ ಸಚ್ಚಿದಾನಂದ (Sachidananda) ಹೇಳಿದ್ದಾರೆ. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸುಮಲತಾ ಅವರ ನಿರ್ಧಾರ ಮಾತ್ರ ಇನ್ನೂ ಕುತೂಹಲವಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚ್ಚಿದಾನಂದ, ಅಂಬರೀಶ್ ಅವರ ಕುಟುಂಬಕ್ಕೆ ಉತ್ತಮ ಹೆಸರಿದೆ. ನಮ್ಮ ರಾಷ್ಟ್ರೀಯ ನಾಯಕರು ಸುಮಲತಾ ಅವರ ಸಂಪರ್ಕದಲ್ಲಿದ್ದಾರೆ. ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಡ್ಯದಲ್ಲಿ ಸಭೆ ಕರೆದಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲೋದು ಖಚಿತ. ಬಿಜೆಪಿ – ಜೆಡಿಎಸ್ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಹೇಳಿದರು.
ಯಾರೇ ಅಭ್ಯರ್ಥಿಯಾದರೂ ಸುಮಲತಾ ಪ್ರಚಾರಕ್ಕೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚ್ಚಿದಾನಂದ, ಸುಮಲತಾ ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮಗೆ ಸುಮಲತಾ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಂದು ಆಶೀರ್ವಾದ ಮಾಡಿದ್ದರು. ನಾನೊಬ್ಬ ಶ್ರೀರಂಗಪಟ್ಟಣದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದೇನೆ. ನೂರಕ್ಕೆ ನೂರು ಅವರು ನನಗೆ ಬಾಹ್ಯ ಬೆಂಬಲ ನೀಡಿದ್ದರು. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸುಮಲತಾ ಜತೆ ಮಾತನಾಡಿದ್ದಾರೆ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮೇಲುಕೋಟೆಯನ್ನು ಹೊರತುಪಡಿಸಿ ಎಲ್ಲ ಅಭ್ಯರ್ಥಿಗಳ ಪರ ಎರಡು ದಿನ ಕ್ಯಾಂಪೇನ್ ಮಾಡಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಪರ ಅವರು ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ. ನಾಳೆ ಮಂಡ್ಯದಲ್ಲಿ ವಿಜಯೇಂದ್ರ ಅವರು ಸಭೆ ಕರೆದಿದ್ದು, ಎಲ್ಲಾ ವಿಚಾರಗಳು ಅಲ್ಲಿ ಚರ್ಚೆಯಾಗಲಿದೆ ಎಂದು ಸಚ್ಚಿದಾನಂದ ಹೇಳಿದರು.