Suhani Bhatnagar: ಅಮೀರ್ ಖಾನ್ ಜೊತೆ ದಂಗಲ್ ಚಿತ್ರದಲ್ಲಿ ನಟಿಸಿದ್ದ 19 ವರ್ಷದ ನಟಿ ನಿಧನ....!
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ (Aamir Khan) ಅವರೊಂದಿಗೆ ʼದಂಗಲ್ʼ (Dangal) ಚಿತ್ರದಲ್ಲಿ ನಟಿಸಿದ್ದ ಯುವ ನಟಿ, 19 ವರ್ಷದ ಸುಹಾನಿ ಭಟ್ನಾಗರ್ (Suhani Bhatnagar) ಶನಿವಾರ (ಫೆಬ್ರವರಿ 17) ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼದಂಗಲ್ʼ ಸಿನಿಮಾದಲ್ಲಿ ಸುಹಾನಿ ಭಟ್ನಾಗರ್ ಅವರು ಯುವ ಬಬಿತಾ ಪೋಗಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
2016ರಲ್ಲಿ ತೆರೆಕಂಡ, ನಿತೇಶ್ ತಿವಾರಿ ನಿರ್ದೇಶನದ ʼದಂಗಲ್ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ಗಳಿಕೆ ಕಂಡಿತ್ತು. ಈ ಚಿತ್ರದಲ್ಲಿನ ಸುಹಾನಿ ಭಟ್ನಾಗರ್ ಅವರ ಪಾತ್ರವೂ ಗಮನ ಸೆಳೆದಿತ್ತು. ಆಮೀರ್ ಖಾನ್ ಜತೆಗೆ ಸಾಕ್ಷಿ ತನ್ವರ್, ಸನ್ಯಾ ಮಲ್ಹೋತ್ರ, ಫಾತಿಮಾ ಶೇಕ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ʼದಂಗಲ್ʼ ಸೂಪರ್ ಹಿಟ್ ಆಗಿದ್ದರೂ ಸುಹಾನಿ ಆ ಬಳಿಕ ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ. ಓದಿನ ಕಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ಬ್ರೇಕ್ ಪಡೆದುಕೊಂಡಿದ್ದರು. ಈ ಮಧ್ಯೆ ಕೆಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಸೋಷಿಯಲ್ ಮೀಡಿಯಾದಲ್ಲಿಯೂ ಅವರು ಅಷ್ಟೇನೂ ಸಕ್ರೀಯರಾಗಿರಲಿಲ್ಲ.
ಕಾರಣವೇನು?
ಕೆಲವು ದಿನಗಳ ಹಿಂದೆ ಸುಹಾನಿ ಅವರ ಕಾಲು ಮುರಿದಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ತೆಗೆದುಕೊಂಡ ಔಷಧ ಅವರ ಮೇಲೆ ಅಡ್ಡ ಪರಿಣಾಮ ಬೀರಿತ್ತು ಎನ್ನಲಾಗಿದೆ. ಹೀಗಾಗಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆ. 17ರಂದು ಫರಿದಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.