ಕೊಳವೆ ಬಾವಿಯಿಂದ ಮಗುವಿನ ರಕ್ಷಣೆ ಯಶಸ್ವಿ; ಹೇಗೆ ನಡೆಯಿತು ಕಾರ್ಯಚರಣೆ?

ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ. ಸುಮಾರು 19 ಗಂಟೆಗೂ ಹೆಚ್ಚು ಕಾಲ ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ (SDRF) ತಂಡಗಳು ನಡೆಸಿದ ರಕ್ಷಣಾ ಕಾರ್ಯಾಚರಣೆಯು ಫಲಿಸಿದೆ. ಹೌದು, ವಿಜಯಪುರ (Vijayapura) ಜಿಲ್ಲೆ ಇಂಡಿ ತಾಲೂಕು ಲಚ್ಯಾಣ (Lachyan) ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ಸಾವು ಗೆದ್ದು (Borewell Tragedy) ಬಂದಿದ್ದಾನೆ. ಸುಮಾರು 20 ಅಡಿಯ ಕೊಳವೆಬಾವಿಯಿಂದ ಬಾಲಕನನ್ನು ಯಶಸ್ವಿಯಾಗಿ (Rescue Operation) ರಕ್ಷಿಸಲಾಗಿದೆ. ಕೊನೆಯ ಹಂತದ ಕಾರ್ಯಾಚರಣೆ ವೇಳೆ ಬಾಲಕ ಅಳುತ್ತಿರುವ ಧ್ವನಿಯು ಸಿಬ್ಬಂದಿಗೆ ಕೇಳಿಸಿದೆ. ಈ ಕುರಿತು ಅಧಿಕಾರಿಗಳೇ ಮಾಹಿತಿ ನೀಡಿದರು. ತದನಂತರ ಬಂಡೆಗಳನ್ನು ಕೊರೆದು ಕೊನೆಗೂ 19 ಗಂಟೆಗಳ ಕಠಿಣ ಪರಿಶ್ರಮದ ಮೂಲಕ ಮಗುವನ್ನು ಹೊರ ತೆಗೆಯುವಲ್ಲಿ ಯಶಸ್ವಿ ಆಗಿದ್ದರೆ. ಇನ್ನು ಮಗುವನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದ ವೈದ್ಯಕೀಯ ಸಿಬ್ಬಂದಿ.
ಮಗು ಬಿದ್ದ ಅರ್ಧ ಗಂಟೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಕಾರಣ ಮಗುವನ್ನು ರಕ್ಷಿಸಲು ಸಾಧ್ಯವಾಯಿತು. ಬುಧವಾರ ರಾತ್ರಿಯೇ ಹಿಟಾಚಿ ಮೂಲಕ ಕೊಳವೆಬಾವಿ ಪಕ್ಕದಲ್ಲಿ ಅಡ್ಡವಾಗಿ 3 ಅಡಿ ರಂಧ್ರ ಕೊರೆಯಲಾಯಿತು. ಆ ರಂಧ್ರದ ಮೂಲಕವೇ ಬಾಲಕ ಬಿದ್ದಿರುವ ಜಾಗಕ್ಕೆ ಹಗ್ಗದ ಮೂಲಕ ಒಂದು ಕ್ಯಾಮೆರಾ ಇಳಿಸಲಾಯಿತು. ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇರಿಸಿ, ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಯಿತು. ಬಾಲಕನ ಕಾಲು ಅಲುಗಾಡುತ್ತಿರುವುದನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ಸಿಬ್ಬಂದಿಯು, ಕಾರ್ಯಾಚರಣೆಯನ್ನು ಇನ್ನಷ್ಟು ಕ್ಷಿಪ್ರಗೊಳಿಸಿ, ಕೊನೆಗೆ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ (2) ಎಂಬ ಬಾಲಕನು ಬುಧವಾರ (ಏಪ್ರಿಲ್ 3) ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ. ಸಂಜೆ 5.30ರ ಸುಮಾರಿಗೆ ಆತನು ಕೊಳವೆಬಾವಿಗೆ ಬಿದ್ದಿದ್ದ. ಇದಾದ ಕೆಲವೇ ಹೊತ್ತಿನಲ್ಲಿ ಅಂದರೆ, ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾತ್ವಿಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು. ಬಾಲಕ ಬದುಕಿ ಬರಲಿ ಎಂದು ಪೂಜೆ ಸಲ್ಲಿಸಿ ಯುವಕರು ಪ್ರಾರ್ಥನೆ ಸಲ್ಲಿಸಿದ್ದರು. ಬಾಲಕನ ತಂದೆ-ತಾಯಿಯಂತೂ ರಾತ್ರಿಯಿಡೀ ಕೊಳವೆಬಾವಿ ಪಕ್ಕದಲ್ಲೇ ಇದ್ದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಪ್ರಾರ್ಥನೆ ಫಲಿಸಿದ್ದು, ಬಾಲಕ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.