Soumya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ನೇಮಕ

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ (Soumya Reddy) ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಎಐಸಿಸಿ ಆದೇಶ ಹೊರಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸೌಮ್ಯ ರೆಡ್ಡಿ (Soumya Reddy) ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ಜೊತೆಗೆ ಚಂಢೀಗಡ ಮತ್ತು ಅರುಣಾಚಲ ಪ್ರದೇಶ ಮಹಿಳಾ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿಯಾಗಿರುವ ಸೌಮ್ಯಾ ರೆಡ್ಡಿ ಅವರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸದ್ಯ ಪುಷ್ಪಾ ಅಮರನಾಥ್ ಅವರು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು.
ಸಚಿವ ರಾಮಲಿಂಗ ರೆಡ್ಡಿ ಪುತ್ರಿಯಾಗಿರುವ ಸೌಮ್ಯ ರೆಡ್ಡಿಗೆ ಇದೀಗ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಒಲಿದಿದೆ.
ಸೌಮ್ಯ ರೆಡ್ಡಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ರಾಜ್ಯದಲ್ಲಿ ಅಭ್ಯರ್ಥಿಯನ್ನು ಹುಡುಕುವ ಪ್ರಕ್ರಿಯೆ ಆರಂಭಿಸಿದ್ದರು. ಚರ್ಚೆಯ ವೇಳೆ ಕೃಪಾ ಅಮರ್ ಆಳ್ವ, ಕಮಲಾಕ್ಷಿ ರಾಜಣ್ಣ, ಐಶ್ವರ್ಯ ಮಹದೇವ್, ನಯನಾ ಮೋಟಮ್ಮ, ವೀಣಾ ಕಾಶಪ್ಪನವರ್ ಮತ್ತು ಕವಿತಾ ರೆಡ್ಡಿ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಹೈಕಮಾಂಡ್ ಸೌಮ್ಯ ರೆಡ್ಡಿಗೆ ಮಣೆ ಹಾಕಿದೆ.
ಹಾಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪುಷ್ಪಾ ಅಮರನಾಥ್ ನವೆಂಬರ್ 2018ರಲ್ಲಿ ನೇಮಕವಾಗಿದ್ದರು. ಪುಷ್ಪಾ ಅವರು ರಾಜ್ಯ ದರ್ಜೆಯ ಸಚಿವರೊಂದಿಗೆ ರಾಜ್ಯಮಟ್ಟದ ಖಾತರಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರೂ ಆಗಿದ್ದಾರೆ.
ಮುಡಾ ಹಗರಣ: ಆದೇಶ ಕಾಯ್ದಿರಿಸಿದ ಕೋರ್ಟ್, ರಾಜ್ಯಪಾಲರ ನಡೆಯತ್ತ ಎಲ್ಲರ ಚಿತ್ತ
ಬೆಂಗಳೂರು, ಆಗಸ್ಟ್ 14: ಮುಡಾ ಜಮೀನು ಡಿನೋಟಿಫಿಕೇಷನ್ ಮಾಡಿಸಿ ಅಕ್ರಮ ಲಾಭ ಪಡೆದ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯರ ನಿದ್ದೆಗೆಡಿಸಿದೆ. ಸಿಎಂಗೆ ರಾಜ್ಯ ಪಾಲರ ನೋಟಿಸ್ ಬೆನ್ನಲ್ಲೇ, ಬಿಜೆಪಿ ಜೆಡಿಎಸ್ ಪಾದಯಾತ್ರೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದವು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಟಿಜೆ ಅಬ್ರಹಾಂ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದಾರೆ. ಎರಡು ದೂರುಗಳ ವಿಚಾರಣೆ ಮಂಗಳವಾರ ನಡೆದಿದ್ದು, ಒಂದು ಪ್ರಕರಣದಲ್ಲಿ ಆದೇಶ ಕಾಯ್ದಿರಿಸಲಾಗಿದೆ. ವಿಚಾರಣೆ ವೇಳೆ ಕೋರ್ಟ್, ರಾಜ್ಯಪಾಲರ ಪೂರ್ವಾನುಮತಿ ಅಗತ್ಯತೆಯ ಪ್ರಶ್ನೆ ಎತ್ತಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಈಗ ರಾಜ್ಯಪಾಲರ ಮುಂದಿನ ನಡೆಯತ್ತ ನೆಟ್ಟಿದೆ.
ಮುಡಾದಿಂದ ಸ್ವಾಧೀನಗೊಂಡ ಬಳಿಕ ಕೃಷಿ ಜಮೀನು ಅಸ್ತಿತ್ವದಲ್ಲೇ ಇರಲಿಲ್ಲ. ನಿವೇಶನಗಳಾಗಿ ಹಂಚಲಾಗಿದ್ದ ಜಮೀನನ್ನು ಖರೀದಿಸಿದ್ದಲ್ಲದೇ ಕೃಷಿ ಜಮೀನೆಂದು ಬಿಂಬಿಸಿ ಭೂ ಪರಿವರ್ತನೆ ಮಾಡಿಸಿದ್ದಾರೆ. ಹೀಗಾಗಿ ಸಿಎಂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು 55.80 ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನಗಳ ಹಂಚಿಕೆ ಪಡೆದು ಅಕ್ರಮ ಲಾಭ ಗಳಿಸಿದ್ದಾರೆ. ಮುಡಾ, ಜಮೀನಿಗೆ ಬದಲಾಗಿ ನಿವೇಶನಗಳನ್ನು ಹಂಚಿದಾಗ ಸಿಎಂ ಪುತ್ರ ಯತೀಂದ್ರ ಶಾಸಕರಾಗಿದ್ದು ಮುಡಾದ ಭಾಗವಾಗಿದ್ದರು. ಅಲ್ಲದೇ ಸಿದ್ದರಾಮಯ್ಯ ಲೋಕಾಯುಕ್ತರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ಜಮೀನುಗಳ ವಿವರ ನೀಡಿದ್ದರು. ಆದರೆ 2013 ರ ಚುನಾವಣಾ ಪ್ರಮಾಣಪತ್ರದಲ್ಲಿ ಈ ಜಮೀನಿರುವುದನ್ನು ಘೋಷಿಸದೇ ಜನಸಾಮಾನ್ಯರಿಂದ ಮರೆಮಾಚಿದ್ದಾರೆಂದು ಟಿಜೆ ಅಬ್ರಹಾಂ ಆರೋಪಿಸಿದ್ದಾರೆ.
ಸದ್ಯ ಈ ಕೇಸ್ನ ಮುಂದಿನ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 21ಕ್ಕೆ ಮುಂದೂಡಿದೆ. ಇನ್ನು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಡ್ಜ್ ಸಂತೋಷ್ ಗಜಾನನ ಭಟ್, ಪೂರ್ವಾನುಮತಿ ಪಡೆಯದೇ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬಹುದೇ ಎಂಬ ಪ್ರಶ್ನೆಯನ್ನು ಅರ್ಜಿದಾರರ ಮುಂದಿಟ್ಟಿದ್ದಾರೆ. ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲಾರದ ಲಕ್ಷ್ಮೀ ಅಯ್ಯಂಗಾರ್, ಈ ಹಂತದಲ್ಲಿ ಪೂರ್ವಾನುಮತಿ ಬೇಕಿಲ್ಲವೆಂದಿದ್ದಾರೆ. ಸ್ನೇಹಮಯಿ ಕೃಷ್ಣ ದೂರಿನ ವಿಚಾರವಾಗಿ, ಕೋರ್ಟ್ ಆಗಸ್ಟ್ 20 ರಂದು ಆದೇಶ ಪ್ರಕಟಿಸಲಿದೆ.
ಈ ಮಧ್ಯೆ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡದೇ ಸಿಎಂ ವಿರುದ್ಧ ಖಾಸಗಿ ದೂರನ್ನು ಸ್ವೀಕರಿಸಬಾರದೆಂದು ಅಲಂ ಪಾಷಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಪೂರ್ವಾನುಮತಿ ಪ್ರಶ್ನೆ ಇನ್ನೂ ಜೀವಂತವಿರುವುದರಿಂದ ಕೋರ್ಟ್ ಆಗಸ್ಟ್ 20 ರಂದು ನೀಡಬಹುದಾದ ಆದೇಶ ಮಹತ್ವ ಪಡೆದಿದೆ. ಅಷ್ಟರೊಳಗೆ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದರೆ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನಲಾಗಿದೆ.