Social media: ರೀಲ್ಸ್ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಸಹೋದರಿಯನ್ನೇ ಕೊಂದ ಸಹೋದರ!
ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯ ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social media) ಹಾಕಿದ್ದಕ್ಕೆ ಕೋಪಗೊಂಡು ತನ್ನ ಸಹೋದರಿಯನ್ನು ಕೊಂದಿದ್ದಾನೆ.
22ರ ಹರೆಯದ ಯುವಕ ಹರಿಲಾಲ್ ತನ್ನ ತಂಗಿ ಸಿಂಧು ಸಂಘವಿಗೆ ರೀಲ್ಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social media) ಪೋಸ್ಟ್ ನಿಷೇಧಿಸಿದ್ದರೂ ಆಕೆ ಕೇಳಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜುಲೈ 24ರಂದು ಜಿಲ್ಲೆಯ ಯೆಲ್ಲಾಂಡು ಮಂಡಲದಲ್ಲಿ ಈ ಘಟನೆ ನಡೆದಿದೆ. 21ರ ಹರೆಯದ ಯುವತಿ ಸಿಂಧು ಸಂಘವಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ಸಿಂಧುಳಾ ಸಹೋದರ ಹರಿಲಾಲ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರಿಲಾಲ್ ಇದೆಲ್ಲ ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡದಂತೆ ಎರಡು-ಮೂರು ಬಾರಿ ಸಿಂಧುಗೆ ಎಚ್ಚರಿಕೆ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಜುಲೈ 24ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರ ಮತ್ತು ಸಹೋದರಿಯ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ಈ ವೇಳೆ ಸಿಂಧು ನನ್ನಿಷ್ಟ ನಾನು ಮಾಡುತ್ತೇನೆ. ನೀನು ಏನು ಬೇಕಾದರು ಮಾಡಿಕೋ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಹರಿಲಾಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಿಂಧುಳನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಂಗಳೂರು: ವಿದ್ಯಾರ್ಥಿ ಅನುಮಾನಾಸ್ಪದ ಸಾವು
ಬೆಂಗಳೂರು(ಜು.27): ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಲಿಂಗರಾಜಪುರ ಸಮೀಪ ನಡೆದಿದ್ದು, ಈ ಘಟನೆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ರಾಮಸ್ವಾಮಿಪಾಳ್ಯ ನಿವಾಸಿ ಮಾರ್ವೇಶ್ (19) ಮೃತ ದುರ್ದೈವಿ. ಈ ಸಂಬಂಧ ರೌಡಿ ಕಾರ್ತಿಕ್ ಹಾಗೂ ಆತನ ಸಹಚರರು ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.
ಪ್ರೇಮದ ಸಂಬಂಧ ಮಂಗಳವಾರ ಕಾಲೇಜಿನಿಂದ ಮಾರ್ವೇಶ್‌ನನ್ನು ಬಲವಂತವಾಗಿ ಕಾರ್ತಿಕ್ ಹಾಗೂ ಆತನ ಸಹಚರರು ಹೊರಗೆ ಕರೆದೊಯ್ದಿದ್ದರು. ಬಳಿಕ ಲಿಂಗರಾಜಪುರದ ಐಓಸಿ ಬಳಿ ಆತನನ್ನು ಕಾರ್ತಿಕ್ ತಂಡ ಬಿಟ್ಟು ಕಳುಹಿಸಿತು. ಆ ವೇಳೆ ವಾಂತಿ ಮಾಡಿಕೊಂಡು ತೀವ್ರವಾಗಿ ಅಸ್ವಸ್ಥನಾಗಿದ್ದ ಮಾರ್ವೇಶ್‌ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಆತನ ಸ್ನೇಹಿತರು ಕರೆದೊಯ್ದಿದ್ದರು. ಆದರೆ ವೈದ್ಯರು ವಿದ್ಯಾರ್ಥಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಪೋಷಕರ ಜತೆ ನೆಲೆಸಿದ್ದ ಮಾರ್ವೇಶ್, ಬಾಣಸವಾಡಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಮಾರ್ವೇಶ್ ಸ್ನೇಹಿತ ಪ್ರೀತಿಸುತ್ತಿದ್ದು, ಇದೇ ವಿಚಾರವಾಗಿ ಮತ್ತೊಂದು ವಿದ್ಯಾರ್ಥಿ ಗುಂಪಿನ ಜತೆ ಆತನಿಗೆ ಮನಸ್ತಾಪವಾಗಿತ್ತು. ಎಂದಿನಂತೆ ಮಂಗಳವಾರ ಸಹ ಕಾಲೇಜಿಗೆ ಮಾರ್ವೇಶ್ ತೆರಳಿದ್ದ. ಆಗ ಗೆಳೆಯನ ಪ್ರೀತಿಗೆ ಸಹಕರಿಸುತ್ತಿದ್ದಾನೆ ಎಂದು ಶಂಕಿಸಿ ಕಾಲೇಜೆನಿಂದ ಮಾರ್ವೇಶ್‌ನನ್ನು ರೌಡಿ ಕಾರ್ತಿಕ್ ಹಾಗೂ ಆತನ ಸಹಚರರು ಕರೆದೊಯ್ದಿದ್ದರು. ಆದರೆ ಆತನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಗಲಿದೆ. ಮೃತ ವಿದ್ಯಾರ್ಥಿ ಪೋಷಕರು ನೀಡಿದ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.