ಸಹೋದರಿಯರ ಸಾಮೂಹಿಕ ಅತ್ಯಾಚಾರ- 10 ಜನ ಆರೋಪಿಗಳು ಅರೆಸ್ಟ್
ರಾಯ್‍ಪುರ: ಅಪ್ರಾಪ್ತೆ ಸೇರಿದಂತೆ ಇಬ್ಬರು ಸಹೋದರಿಯರ ಮೇಲೆ ಹತ್ತು ಜನ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಛತ್ತೀಸ್‍ಗಡದ (Chhattisgarh) ರಾಯ್‍ಪುರದಲ್ಲಿ (Raipur) ನಡೆದಿದೆ.
19 ಮತ್ತು 16 ವರ್ಷ ವಯಸ್ಸಿನ ಸಹೋದರಿಯರು ಸ್ನೇಹಿತನೊಂದಿಗೆ ರಕ್ಷಾಬಂಧನ ಹಬ್ಬ ಆಚರಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ ಮಂದಿರ ಹಸೌದ್ ಪ್ರದೇಶದ ಹಳ್ಳಿಯೊಂದರ ಬಳಿ ಆರೋಪಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಆರೋಪಿಗಳು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ನಗದು ಮತ್ತು ಮೊಬೈಲ್ ಫೋನ್‍ಗಳನ್ನು ದೋಚಿದ್ದಾರೆ. ಈ ವೇಳೆ ಸಹೋದರಿಯರ ಸ್ನೇಹಿತನ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.
ಇದಾದ ಬಳಿಕ ಇಬ್ಬರು ಸಹೋದರಿಯರು ಹಾಗೂ ಅವರ ಸ್ನೇಹಿತ ಸ್ಥಳೀಯ ಪೊಲೀಸ್ (Police) ಗಸ್ತು ಶಿಬಿರಕ್ಕೆ ತೆರಳಿದ್ದಾರೆ. ಅಲ್ಲಿಂದ ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಬಳಿಕ ಅವರು ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಈ ಸಂಬಂಧ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಓರ್ವ ಸ್ಥಳೀಯ ಬಿಜೆಪಿ ನಾಯಕನ ಪುತ್ರ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ), ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಈಗಾಗಲೇ ಅಪರಾಧ ಕೃತ್ಯದಲ್ಲಿ ತೊಡಗಿದ್ದವರು ಇದ್ದಾರೆ. ಅವರಲ್ಲಿ ಕೆಲವರು ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದವರಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಹೋದರರೇ ಬಿಟ್ಟುಬಿಡಿ ಅಂತಾ ಅಂಗಲಾಚಿದ್ರೂ ಮಹಿಳೆಗೆ ಗುಂಪು ಥಳಿತ!
ಭೋಪಾಲ್: ಮಹಿಳೆಯೊಬ್ಬರನ್ನು ಎಳೆದಾಡಿ, ಜುಟ್ಟು ಹಿಡಿದು ಗುಂಪೊಂದು ಥಳಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ (Madhyapradesh) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಬಸ್ ನಿಲ್ದಾಣದಲ್ಲಿ ಗುಂಪು ಎಳೆದಾಡುತ್ತಿರುವುದು ಹಾಗೂ ಪಕ್ಕದಲ್ಲಿ ಕಂದಮ್ಮ ಇರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಮಹಿಳೆಯನ್ನು (Woman) ಎಳೆದುಕೊಂಡು ಬಂದು ಹಲ್ಲೆ ನಡೆಸುವುದು, ಥಳಿಸುವುದನ್ನು ಕಾಣಬಹುದಾಗಿದೆ. ಈ ವೇಳೆ ಮಹಿಳೆಯು, ಸಹೋದರರೇ ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುವುದನ್ನು ನೋಡಿದರೆ ನಿಮ್ಮ ಕರುಳು ಚುರುಕ್ ಅನ್ನದೆ ಇರಲಾರದು. ಮಹಿಳೆ ಬೇಡಿಕೊಂಡರೂ ಗುಂಪು ಮಾತ್ರ ಆಕೆ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರಿಸಿದೆ.
ಇಷ್ಟು ಮಾತ್ರವಲ್ಲದೆ 5 ತಿಂಗಳ ಮಗುವಿನೊಂದಿಗೆ ಅಲೆದಾಡುತ್ತಿದ್ದ ಈ ಮಹಿಳೆ ಸಹೋದರ ದಯವಿಟ್ಟು ನನ್ನ ಕುಟುಂಬವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಅಳುತ್ತಿರುವುದು ಕೂಡ ವೀಡಿಯೋದಲ್ಲಿ ಗಮನಿಸಬಹುದಾಗಿದೆ.
ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ಗೋಪಾಲ್‍ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರ ಬಂಧನಕ್ಕೆ ಬಲೆ ಬೀಸಲಾಗಿದೆ.