ಸಿದ್ದರಾಮಯ್ಯ ರವರು ನನಗೆ ಆತ್ಮೀಯರಾಗಿದ್ದಾರೆ ; ಇತ್ತೀಚೆಗೆ ಬಹಳ ಸೈಲೆಂಟ್ ಆಗಿದ್ದಾರೆ - ಯತ್ನಾಳ್
ವಿಜಯಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬಹಳ ಸೈಲೆಂಟ್ ಆಗಿದ್ದಾರೆ. ಈ ರೀತಿ ಹೇಳುವ ಮೂಲಕ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ಅವರ ಸೈಲೆಂಟ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅದಲ್ಲದೇ ಸಿದ್ದರಾಮಯ್ಯ ಅವರು ನನಗೆ ಆತ್ಮೀಯರಿದ್ದಾರೆ ಎನ್ನುವ ಮೂಲಕ ಮುಖ್ಯಮಂತ್ರಿಗಳ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಪ್ರದರ್ಶಿಸಿದ್ದಾರೆ.
ದೇವರ ಹಿಪ್ಪರಗಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾಕೋ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಬಹಳ ಸೈಲೆಂಟ್ ಆಗಿದ್ದಾರೆ. ಈ ರೀತಿ ಯಾಕೆ ಸೈಲೆಂಟ್ ಆಗಿದ್ದೀರಾ ಎಂದು ನಾನು ಸಿದ್ದರಾಮಯ್ಯ ಅವರಿಗೆ ಕೇಳಿದ್ದೇ. ಆಗ ಏನ್ ಮಾಡೋದು ಯತ್ನಾಳ್ ಇದು ಕೊನೆದಿದೆ. ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಲ್ಲ. ಜನರಿಗೆ ಉತ್ತಮ ಆಡಳಿತ ನೀಡ್ತಿನಿ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನನ್ನು ನೋಡಲು ಬಂದಿದ್ದರು ಎಂದ ಯತ್ನಾಳ್, ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ? ಅವರು ರಾಜ್ಯದ ಮುಖ್ಯಮಂತ್ರಿ. ಆದ್ದರಿಂದ ಶಾಸಕರು ಅವರ ಬಳಿ ಹೋಗೋದು ಸಹಜ ಎಂದು ತಿಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ಮಾತುಗಳನ್ನು ಯತ್ನಾಳ್ ಆಡಿದ್ದಾರೆ.
ಇದೇ ವೇಳೆ, ದೇಶ, ಹಿಂದೂ ಧರ್ಮ ಉಳಿವಿಗಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಕಾರ್ಯವಾಗಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು.
ದುಷ್ಟಶಕ್ತಿಗಳನ್ನು ಕೊನೆಗಾಣಿಸಬೇಕು!
ಇದೇ ವೇಳೆ ಮಾತನಾಡಿದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಈ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಬ್ಬರೂ ಹೆಮ್ಮೆಪಡುವಂತಾಗಿದ್ದು, ದೇಶದ ಸ್ವಾತಂತ್ರತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚನ್ನಮ್ಮಾಜಿಯ ಭಂಟ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು. ದೇಶಕ್ಕಾಗಿ ಸಹಸ್ರಾರು ಜನ ಬಲಿದಾನವಾಗಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವ ಯಾವುದೇ ದುಷ್ಟ ಶಕ್ತಿಯನ್ನು ಕೊನೆಗಾಣಿಸಬೇಕು. ಇದಕ್ಕಾಗಿ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳು ನಮ್ಮ ದೇಶದ ಸೈನಿಕರ ಮೇಲೆ ಆಕ್ರಮಣ ಮಾಡಿದರೆ ನೀವು ಪ್ರತ್ಯುತ್ತರ ನೀಡಬೇಕು ಎಂಬ ಕಾನೂನು ತಂದಿದ್ದಾರೆ. ಅದಕ್ಕಾಗಿ ನಮ್ಮ ದೇಶ ನೆಮ್ಮದಿಯಿಂದ ಇದೆ. ದೇಶ, ಧರ್ಮ ಒಡೆಯುವ ಸಂಕೂಚಿತ ಮನೋಭಾವನೆ ಕಿತ್ತೊಗೆದು ವಿಶಾಲ ಮನೋಭಾವದಿಂದ ದೇಶದ ಸ್ವಾಭಿಮಾನ ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಸರೂರಿನ ಶಾಂತಮಯ ಮಹಾಸ್ವಾಮಿಗಳು, ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಹುಲಜಂತಿಯ ಮಹಾಳಿಂಗರಾಯ ಮಹಾರಾಜರು, ಪಟ್ಟದ ಪೂಜಾರಿಗಳಾದ ಸೋಮರಾಯ ಪೂಜಾರಿ, ಡಾ. ಸತೀಶ ನಾಡಗೌಡ ಸಾನ್ನಿಧ್ಯ ವಹಿಸಿದ್ದರು. ಶಾಸಕ ರಾಜುಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಶರಣಪ್ಪ ಸುಣಗಾರ, ಡಾ.ಪ್ರಭುಗೌಡ ಲಿಂಗದಳ್ಳಿ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಸುಜಾತಾ ಕಳ್ಳಿಮನಿ, ಸಂತೋಷಗೌಡ ದೊಡ್ಡಮನಿ, ಗೌರಮ್ಮ ಮುತ್ತತ್ತಿ, ಸಿದ್ದು ಬುಳ್ಳಾ ಸೇರಿದಂತೆ ಅನೇಕರಿದ್ದರು.