6 ರೇಟಿಂಗ್ ಪಾಯಿಂಟ್ಗಳ ಅತಂರದಲ್ಲಿ ಅಗ್ರಸ್ಥಾನ ತಪ್ಪಿಸಿಕೊಂಡ ಶುಭ್ಮನ್ ಗಿಲ್; ವಿರಾಟ್ ಕೊಹ್ಲಿ ಸ್ಥಾನವೂ ಏರಿಕೆ!
ಬುಧವಾರ, ಅಕ್ಟೋಬರ್ 25ರಂದು ಬಿಡುಗಡೆಯಾದ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರು ಸ್ವಲ್ಪದರಲ್ಲೇ ಅಗ್ರಸ್ಥಾನವನ್ನು ತಪ್ಪಿಸಿಕೊಂಡಿದ್ದಾರೆ.
ಐಸಿಸಿ ಏಕದಿನ ಬ್ಯಾಟಿಂಗ್ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರಿಗಿಂತ ಕೇವಲ 6 ರೇಟಿಂಗ್ ಪಾಯಿಂಟ್‌ಗಳ ಕೊರತೆಯನ್ನು ಶುಭ್ಮನ್ ಗಿಲ್ ಅನುಭವಿಸಿದ್ದಾರೆ.
ಡೆಂಗ್ಯೂ ಜ್ವರದಿಂದಾಗಿ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡ ಶುಭ್ಮನ್ ಗಿಲ್ ಅವರು 823 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಅಫ್ಘಾನಿಸ್ತಾನ ವಿರುದ್ಧ 74 ರನ್ ಗಳಿಸಿದ ಹೊರತಾಗಿಯೂ ಬಾಬರ್ ಅಜಂ ಅಂಕಗಳು 829 ರೇಟಿಂಗ್ ಪಾಯಿಂಟ್‌ಗಳಿಗೆ ಕುಸಿದಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇದುವರೆಗೆ ಐದು ಇನ್ನಿಂಗ್ಸ್‌ಗಳಿಂದ ಕೇವಲ 157 ರನ್‌ಗಳನ್ನು ಗಳಿಸಿರುವ ಬಾಬರ್ ಅಜಂ ರೇಟಿಂಗ್ ಪಾಯಿಂಟ್‌ಗಳು ಕುಸಿದಿವೆ.
ಭಾರತ ಪರ ಕೇವಲ ಮೂರು ಪಂದ್ಯಗಳಿಂದ ಶುಭ್ಮನ್ ಗಿಲ್ 95 ರನ್ ಗಳಿಸಿದ್ದಾರೆ. ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ 53 ರನ್ ಗಳಿಸಿದ ಬಲಗೈ ಬ್ಯಾಟರ್ 823 ರೇಟಿಂಗ್ ಪಾಯಿಂಟ್‌ಗಳಿಗೆ ಸುಧಾರಿಸಿದ್ದಾರೆ.
ಬಾಬರ್ ಅಜಂ ಅವರ ಅಗ್ರಸ್ಥಾನ ಹತ್ತಿರ ಸುಳಿದ ಶುಭ್ಮನ್ ಗಿಲ್ ಏಕೈಕ ಆಟಗಾರನಲ್ಲ, ಇನ್‌ಫಾರ್ಮ್ ಬ್ಯಾಟರ್ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕೂಡ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆರಂಭದ ನಂತರ, ಮೂರು ಶತಕ ಬಾರಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಸಹ ಆಟಗಾರ ಹೆನ್ರಿಚ್ ಕ್ಲಾಸೆನ್ ಅವರು 7 ಸ್ಥಾನಗಳನ್ನು ಮೇಲೇರಿ 4ನೇ ಸ್ಥಾನ ಗಳಿಸಿ ವೃತ್ತಿಜೀವನದ ಉನ್ನತ ರೇಟಿಂಗ್ ಗಳಿಸಿದ್ದಾರೆ.
ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಮೂರು ಸ್ಥಾನಗಳ ಏರಿಕೆ ಕಂಡಿದ್ದಾರೆ ಮತ್ತು ಎರಡು ಸ್ಥಾನಗಳ ಏರಿಕೆ ಕಂಡಿರುವ ಡೇವಿಡ್ ವಾರ್ನರ್ ಜೊತೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿರುವ ಭಾರತದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಏರಿಕೆ ಕಂಡು 8ನೇ ಸ್ಥಾನ ತಲುಪಿದ್ದಾರೆ.
ಮಧ್ಯಮ ಕ್ರಮಾಂಕದ ಸ್ಥಿರ ಪ್ರದರ್ಶನಕಾರ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಅವರು ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳಿಂದ 268 ರನ್‌ಗಳ ನಂತರ 16 ಸ್ಥಾನಗಳ ಜಿಗಿತ ಕಂಡಿದ್ದಾರೆ ಮತ್ತು ಒಟ್ಟಾರೆ 13ನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕ
ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆದರೆ ವಿಶ್ವಕಪ್‌ನ ಐದು ಪಂದ್ಯಗಳಿಂದ 6 ವಿಕೆಟ್‌ಗಳನ್ನು ಪಡೆದ ನಂತರ, ಭಾರತದ ವೇಗಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದು, ಹೇಜಲ್‌ವುಡ್ ಹಿಂದಿಕ್ಕಲು ಅಣಿಯಾಗಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ ನಂತರ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಎರಡು ಸ್ಥಾನಗಳ ಏರಿಕೆ ಕಂಡು ಮೂರನೇ ಸ್ಥಾನ ತಲುಪಿದ್ದಾರೆ ಮತ್ತು ವೃತ್ತಿಜೀವನದ ಉನ್ನತ ರೇಟಿಂಗ್ ಗಳಿಸಿದ್ದಾರೆ.
ಅಫ್ಘಾನಿಸ್ತಾನದ ಅನುಭವಿ ಆಟಗಾರ ಮೊಹಮ್ಮದ್ ನಬಿ 4 ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ಮತ್ತು ಆಸ್ಟ್ರೇಲಿಯಾದ ಸ್ಪಿನ್ನರ್ ಆಡಮ್ ಝಂಪಾ 4 ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ಏರಿಕೆ ಕಂಡು ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.
ಐಸಿಸಿ ಏಕದಿನ ಆಲ್ರೌಂಡರ್ ಶ್ರೇಯಾಂಕ
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಏಕದಿನ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
ದಕ್ಷಿಣ ಆಫ್ರಿಕಾದ ಯುವ ಆಟಗಾರ ಮಾರ್ಕೊ ಜಾನ್ಸೆನ್ ಅವರು ಈ ಪಟ್ಟಿಯಲ್ಲಿ 23 ಸ್ಥಾನಗಳನ್ನು ಜಿಗಿತ ಕಂಡು ಸ್ಕಾಟ್ಲೆಂಡ್‌ನ ಮೈಕೆಲ್ ಲೀಸ್ಕ್ ಜೊತೆಗೆ 11ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಮತ್ತು ರೇಟಿಂಗ್ ಪಾಯಿಂಟ್ಸ್
- ಬಾಬರ್ ಅಜಂ (ಪಾಕಿಸ್ತಾನ) – 829
- ಶುಭ್ಮನ್ ಗಿಲ್ (ಭಾರತ) – 823
- ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) – 769
- ಹೆನ್ರಿಕ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) – 756
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) – 747
- ವಿರಾಟ್ ಕೊಹ್ಲಿ (ಭಾರತ) – 747
- ಹ್ಯಾರಿ ಟೆಕ್ಟರ್ (ಐರ್ಲೆಂಡ್) – 729
- ರೋಹಿತ್ ಶರ್ಮಾ (ಭಾರತ) – 725
- ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ) – 716
- ಇಮಾಮ್-ಉಲ್-ಹಕ್ (ಪಾಕಿಸ್ತಾನ) – 704