Shreyanka Patil : ಫೈನಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಸ್ಪಿನ್ ಮೋಡಿ ಮಾಡಿದ 21 ವರ್ಷದ ಕನ್ನಡತಿ ಶ್ರೇಯಾಂಕ ಪಾಟೀಲ್.!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ರಾಯಲ್ಲಾಗಿಯೇ ಟ್ರೋಫಿ ಗೆದ್ದುಕೊಂಡಿದೆ. ಹೀಗೆ ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಕನ್ನಡತಿ ಶ್ರೇಯಾಂಕ ಪಾಟೀಲ್ (Shreyanka Patil) ಎಂಬುದು ವಿಶೇಷ. ಆದರೆ ಇದೇ ಶ್ರೇಯಾಂಕಾ ಆರಂಭಿಕ ಪಂದ್ಯಗಳಲ್ಲಿ ಮಿಂಚಿರಲಿಲ್ಲ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧ ಪಂದ್ಯದಲ್ಲಿ ಶ್ರೇಯಾಂಕಾ 3 ಓವರ್ಗಳಲ್ಲಿ 32 ರನ್ ನೀಡಿದ್ದರು. ಇನ್ನು ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 13 ರನ್ ಬಿಟ್ಟುಕೊಟ್ಟಿದ್ದರು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 40 ರನ್ಗಳು. ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 2 ಓವರ್ಗಳಲ್ಲಿ 15 ರನ್ ನೀಡಿ ಒಂದು ವಿಕೆಟ್ ಮಾತ್ರ ಪಡೆದಿದ್ದರು.
ಹೀಗಾಗಿಯೇ ಕೆಲ ಪಂದ್ಯಗಳಿಂದ ಶ್ರೇಯಾಂಕಾ ಪಾಟೀಲ್ ಅವರನ್ನು ಕೈ ಬಿಡಲಾಗಿತ್ತು. ಆದರೆ ಮತ್ತೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದ ಬಳಿಕ ಕನ್ನಡತಿ ಕಮಾಲ್ ಮಾಡಲಾರಂಭಿಸಿದಳು. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ಶ್ರೇಯಾಂಕಾ, ಕೇವಲ 16 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.
Shreyanka Patil topped the bowling charts with 1⃣3⃣ wickets against her name and won the Purple Cap 🔝 🙌#TATAWPL | #Final | @shreyanka_patil | @RCBTweets pic.twitter.com/eBcfJn6dBj
— Women's Premier League (WPL) (@wplt20) March 17, 2024
ಹಾಗೆಯೇ ಫೈನಲ್ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿದ ಶ್ರೇಯಾಂಕಾ ಪಾಟೀಲ್ 3.3 ಓವರ್ಗಳಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಉರುಳಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು.
ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕನ್ನಡತಿ ದ್ವಿತೀಯಾರ್ಧದಲ್ಲಿ ಕಮಾಲ್ ಮಾಡಿದ್ದರು. ಈ ಕಮಾಲ್ನೊಂದಿಗೆ 21 ವರ್ಷದ ಶ್ರೇಯಾಂಕಾ ಪಾಟೀಲ್ ಒಟ್ಟು 13 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದಾರೆ. ಈ ಮೂಲಕ ಆರ್ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಡುವಲ್ಲಿ ಕನ್ನಡತಿ ಪ್ರಮುಖ ಪಾತ್ರವಹಿಸಿದ್ದಾರೆ.