ರೋಹಿತ್ ಶರ್ಮಾಗೆ ಶಾಕ್; ದಂಡ ವಿಧಿಸಿದ ಮುಂಬೈ ಪೊಲೀಸರು!
ಪುಣೆ: ಇಲ್ಲಿನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ 215 ಕಿ.ಮೀ. ವೇಗದಲ್ಲಿ ಅಜಾಗರೂಕತೆಯಿಂದ ತಮ್ಮ ಲಂಬೋರ್ಗಿನಿ ಕಾರನ್ನು ಚಲಾಯಿಸಿದ್ದಕ್ಕೆ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಮುಂಬೈ ಪೊಲೀಸರು (Mumbai Police) ದಂಡ ವಿಧಿಸಿದ್ದಾರೆ.
ವಿಶ್ವಕಪ್‍ನಲ್ಲಿ (World Cup) ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಉಳಿದ ಆಟಗಾರರನ್ನು ಸೇರಿಕೊಳ್ಳಲು ಅವರು ಈ ವೇಗದಲ್ಲಿ ಚಾಲನೆ ಮಾಡಿದ್ದಾರೆ ಎನ್ನಲಾಗಿದೆ. ರೋಹಿತ್ ಅವರ ಕಾರು ಮೊದಲು 200 ಕಿಮೀ ವೇಗದಲ್ಲಿತ್ತು. ಬಳಿಕ ಅದು 215ರ ವೇಗವನ್ನು ತಲುಪಿತ್ತು. ಇದರಿಂದಾಗಿ ಅವರಿಗೆ ಮೂರು ನಿಯಮಗಳನ್ನು ಉಲ್ಲಂಘಿಸಿದ ಚಲನ್ ನೀಡಲಾಗಿದೆ.
ರೋಹಿತ್ ಭಾನುವಾರ ತಂಡದ ಸದಸ್ಯರೊಂದಿಗೆ ಪುಣೆಗೆ ಬಂದಿಳಿದರು. ವಿಶ್ರಾಂತಿಯ ದಿನವಾದ ಸೋಮವಾರ ಅವರು ಮುಂಬೈನ ಮನೆಗೆ ತೆರಳಿದ್ದಾರೆ. ಬಳಿಕ ಇಂದು ನಡೆಯಲಿರುವ ಪಂದ್ಯಕ್ಕಾಗಿ ಮಂಗಳವಾರ ವಾಪಾಸ್ ಆಗಿದ್ದರು. ಈ ವೇಳೆ ಅವರು ಕಾರನ್ನು ವೇಗವಾಗಿ ಚಾಲನೆ ಮಾಡಿದ್ದಾರೆ ಎನ್ನಲಾಗಿದೆ.
ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ (248 ರನ್) ಮತ್ತು ಡೆವೊನ್ ಕಾನ್ವೇ (229 ರನ್) ಗಳಿಸಿದ್ದರೆ ರೋಹಿತ್ ಶರ್ಮಾ 217 ರನ್ ಗಳಿಸಿದ್ದಾರೆ.
ಸಿಕ್ಸರ್‍ನಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ದಾಖಲೆ ಮುರಿದು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಇದೀಗ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಏಕದಿನ ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಏಕದಿನ ಮಾದರಿಯಲ್ಲಿ ಶಾಹಿನ್ ಅಫ್ರಿದಿ 351 ಸಿಕ್ಸರ್ ಸಿಡಿಸಿ ಮೊದಲನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 331 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 303 ಸಿಕ್ಸರ್ ಸಿಡಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಏಕದಿನ ಮಾದರಿಯಲ್ಲಿ 300 ಸಿಕ್ಸರ್ ಬಾರಿಸಿದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 6 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 86 ರನ್ ಗಳಿಸಿದ ರೋಹಿತ್ ಶರ್ಮಾ ಭಾರತ ಸುಲಭ ಜಯ ಸಾಧಿಸಲು ನೆರವಾಗಿದ್ದರು. ಇಂದು ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಪುಣೆಯಲ್ಲಿ ಸೆಣಸಲಿದೆ.