ಅಶ್ವಿನಿ ಪುನೀತ್ ರಾಜ್‌ಕುಮಾರ್ ರನ್ನು ಭೇಟಿಯಾದ ಶೋಭಾ ಕರಂದ್ಲಾಜೆ ; ಚುನಾವಣಾ ಪ್ರಚಾರಕ್ಕೆ ಒಪ್ಪಿಗೆ..?
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅಶ್ವಿನಿ ಪುನೀತ್ ರಾಜಕುಮಾರ್ ಭೇಟಿ ಮಾಡಿದರು. ಚುನಾವಣೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಚಾರ ನಡೆಸಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಮಂಗಳವಾರ ಶೋಭಾ ಕರಂದ್ಲಾಜೆ ಸದಾಶಿವ ನಗರದ ನಿವಾಸದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ, ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.
ಈ ಕುರಿತು ಡಾ. ಸಿ. ಎನ್. ಅಶ್ವತ್ಥ ನಾರಾಯಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಕೇಂದ್ರ ಸಚಿವರು ಹಾಗೂ ನಮ್ಮ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕುಮಾರಿ ಶೋಭಾ ಕರಂದ್ಲಾಜೆ ಅವರ ಜತೆ ಭೇಟಿ ನೀಡಿ, ಔಪಚಾರಿಕ ಮಾತುಕತೆ ನಡೆಸಲಾಯಿತು’ ಎಂದು ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ‘ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ, ಲೋಕಸಭಾ ಚುನಾವಣೆಗೆ ಬೆಂಬಲ ನೀಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಅವರು ಉಪಸ್ಥಿತರಿದ್ದರು’ ಎಂದು ತಿಳಿಸಿದ್ದಾರೆ.
ಕ್ಷೇತ್ರ ಬದಲಾವಣೆ?; ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ. ಆದರೆ ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಮಾರ್ಚ್ 13ರಂದದು ಬಿಡುಗಡೆಯಾಗಿತ್ತು.
ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆ ಮಾಡಲಾಗಿತ್ತು. ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ‘ಗೋ ಬ್ಯಾಕ್ ಶೋಭಾ’ ಎಂಬ ಅಭಿಯಾನ ನಡೆದಿತ್ತು. ಆದ್ದರಿಂದ ಹಾಲಿ ಸಂದಸೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆ ಮಾಡಲಾಗಿದೆ. ಆದರೆ ಇದರಿಂದಾಗಿ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿ. ವಿ. ಸದಾನಂದ ಗೌಡರಿಗೆ ಟಿಕೆಟ್ ಕೈತಪ್ಪಿದೆ.
ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಟಿಕೆಟ್ ಘೋಷಣೆಯಾದ ಬಳಿಕ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಹಲವು ಗಣ್ಯರನ್ನು ಭೇಟಿಯಾಗಿ ಚುನಾವಣೆಗೆ ಬೆಂಬಲ ಕೇಳುತ್ತಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ರಾಜಕೀಯದಿಂದ ಸದಾ ದೂರ. ಈ ಬಾರಿ ಬಿಜೆಪಿ ರಾಜ್ಯಸಭೆ ಟಿಕಟ್ ನೀಡಲು ಅವರನ್ನು ಸಂಪರ್ಕಿಸಿತ್ತು ಎಂಬ ಮಾಹಿತಿ ಇದೆ. ಆದರೆ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಆಹ್ವಾನವನ್ನು ತಿರಸ್ಕರಿಸಿದ್ದರು.
ಈಗ ಶೋಭಾ ಕರಂದ್ಲಾಜೆ ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಚಾರ ನಡೆಸುವ ಸಾಧ್ಯತೆ ಕಡಿಮೆ. ಮತ್ತೊಂದು ಕಡೆ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಶೋಭಾ ಕರಂದ್ಲಾಜೆ ಪರವಾಗಿ ಪ್ರಚಾರಕ್ಕೆ ಹೋದರೆ ಮತ್ತೊಂದು ಕಡೆ ಗೀತಾ ಶಿವರಾಜ್ ಕುಮಾರ್ ಪರವಾಗಿಯೂ ಪ್ರಚಾರ ನಡೆಸಬೇಕಾಗುತ್ತದೆ. ಆದ್ದರಿಂದ ಅಶ್ವಿನಿ ಪುನೀತ್ ರಾಜಕುಮಾರ್ ರಾಜಕೀಯದಿಂದ ದೂರವಾಗಿಯೇ ಉಳಿಯುವ ನಿರೀಕ್ಷೆ ಇದೆ. ಡಾ. ರಾಜ್ ಕುಮಾರ್ ಕುಟುಂಬ ಮೊದಲಿಂದಲೂ ರಾಜಕೀಯದಿಂದ ದೂರವಾಗಿಯೇ ಇದೆ.
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ರಾಜ್ ಕುಟುಂಬದ ಸೊಸೆ ಅವರು 2014ರಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.