ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣೆಗೆ ಶಿವಕುಮಾರ್ ಮತ್ತು ಅನಂತ ಪದ್ಮನಾಭ ಇನ್ಸ್ಪೆಕ್ಟರ್ ಗಳಾಗಿ ನೇಮಕ..!
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಇವರನ್ನು ಹಲವು ತಿಂಗಳಿನಿಂದ ಖಾಲಿಯಾಗಿದ್ದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದೆ. ರಫ್ ಎಂಡ್ ಟಫ್ ಅಧಿಕಾರಿಯಾಗಿದ್ದ ಟಿ.ಡಿ.ನಾಗರಾಜ್ ಅವರ ಅವರನ್ನು ಕಾರ್ಕಳಕ್ಕೆ ವರ್ಗಾವಣೆಗೊಂಡ ಬಳಿಕ ಗ್ರಾಮಾಂತರ ಪೋಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಇಲ್ಲದೆ ಖಾಲಿಯಾಗಿತ್ತು.
ಇವರ ಜೊತೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆ ಯ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಗಿದ್ದ ಆನಂತಪದ್ಮನಾಭ ಅವರಿಗೆ ಅದೇಶ ನೀಡಿದೆ. ಇವರು ಈ ಹಿಂದೆ ಕದ್ರಿ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿಯೂ ಕರ್ತವ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ.
ಇದೀಗ ವಿವೇಕಾನಂದ ಅವರು ವರ್ಗಾವಣೆ ಆದ ಬಳಿಕ ಖಾಲಿಯಾಗಿದ್ದ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.
ರಾಜಕೀಯವಾಗಿ ಅತ್ಯಂತ ಪ್ರಬಲ ಕ್ಷೇತ್ರ ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶ ವಾದ ಬಂಟ್ವಾಳದ ಎರಡು ಪೋಲೀಸ್ ಠಾಣೆಗಳಿಗೆ ಕರ್ತವ್ಯ ಕ್ಕೆ ಹಾಜರಾಗಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.