ಇಂಡಿಯಾ ಮೈತ್ರಿಕೂಟವನ್ನು ಇಕ್ಕಟ್ಟಿಗೆ ಸಿಲುಕಿಸಿದ ಶಿವಸೇನಾ!

ನಾಗಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಐಎನ್‌ಡಿಐಎ ಮಿತ್ರಪಕ್ಷಗಳ ನಡುವೆ ಇನ್ನೂ ಸಮನ್ವಯ ಸಾಧ್ಯವಾಗಿಲ್ಲ. ಮುಖ್ಯವಾಗಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಈ ವಿಚಾರ ಕಗ್ಗಂಟಾಗಿ ಉಳಿದಿದೆ. ಮಹಾರಾಷ್ಟ್ರದಲ್ಲಿ ಇದು ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಇಲ್ಲಿ ಕಾಂಗ್ರೆಸ್, ಶಿವಸೇನಾ (ಉದ್ಧವ್ ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ) ನಡುವೆ 48 ಸೀಟುಗಳ ಹಂಚಿಕೆ ನಡೆಯಬೇಕಿದೆ. ಇದೇ ತಲೆನೋವು ಬಿಜೆಪಿಗೂ ಎದುರಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಎಲ್ಲಾ 48 ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಕಳೆದ ವಾರ ಅರ್ಜಿ ಆಹ್ವಾನಿಸಿದೆ. ಆದರೆ ತಮಗೆ 23 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಶಿವಸೇನಾ (ಯುಬಿಟಿ) ಪಟ್ಟು ಹಿಡಿದಿದೆ. 2019ರಲ್ಲಿ ಬಿಜೆಪಿ ಜತೆಗಿನ ಮೈತ್ರಿಯಡಿ ಸ್ಪರ್ಧಿಸಿದ್ದ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕು ಎಂದು ಸಂಸದ ಸಂಜಯ್ ರಾವತ್ ಪುನರುಚ್ಚರಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿಕೆ ನೀಡಿದ ರಾವತ್, ಈ ಹಿಂದೆ ಬಿಜೆಪಿ ಜತೆಗಿನ ಮೈತ್ರಿಯಡಿ ಶಿವಸೇನಾ ಯಾವಾಗಲೂ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿತ್ತು. ಹೀಗಾಗಿ ತಮ್ಮ ಬೇಡಿಕೆ ಸಮರ್ಥನೀಯ ಎಂದಿದ್ದಾರೆ.
“ನಾವು ಅದರಲ್ಲಿ 18 ಸ್ಥಾನಗಳನ್ನು ಗೆದ್ದಿದ್ದೆವು. ಅವರಲ್ಲಿ ಕೆಲವು ಸಂಸದರು ನಮ್ಮನ್ನು ಬಿಟ್ಟು ಹೋಗಿದ್ದರೂ, ಇವುಗಳ ಮೇಲೆ ಯಾವು ಚರ್ಚೆಯೂ ಇಲ್ಲ. ಹಾಗೆಯೇ ಎನ್‌ಸಿಪಿಯ ನಾಲ್ಕು ಮತ್ತು ಕಾಂಗ್ರೆಸ್‌ನ ಚಂದ್ರಾರ್ಪುರ ಸೀಟುಗಳ ಬಗ್ಗೆಯೂ ಯಾವ ಚರ್ಚೆಯೂ ಬೇಕಿಲ್ಲ” ಎಂದು ರಾವತ್ ಹೇಳಿದ್ದಾರೆ.
“ನಾವು ಸಂಭಾಜಿ ನಗರ ಮತ್ತು ಶಿರೂರ್ ಕ್ಷೇತ್ರಗಳಲ್ಲಿ ಬಹಳ ಕಡಿಮೆ ಅಂತರದಿಂದ ಸೋತಿದ್ದೆವು. ಆದರೆ ಅವುಗಳಲ್ಲಿ ನಮಗೇ ಸೀಟು ಬೇಕು ಎಂದು ಪ್ರತಿಪಾದಿಸುತ್ತಿಲ್ಲ. ಯಾವ ಕ್ಷೇತ್ರದಲ್ಲಿಯೂ ಎನ್‌ಸಿಪಿ ಜತೆ ನಮಗೆ ಯಾವ ಸಂಘರ್ಷವೂ ಇಲ್ಲ. ಕಾಂಗ್ರೆಸ್ ಜತೆ ನಾವು ನಮ್ಮ ಚರ್ಚೆಗಳನ್ನು ಮಂಗಳವಾರ ಅಂತಿಮಗೊಳಿಸಲಿದ್ದೇವೆ. ಸಂಸದ ವಿನಾಯಕ್ ರಾವತ್ ಮತ್ತು ನಾನು ಅವರ ನಿಯೋಗವನ್ನು ಭೇಟಿ ಮಾಡಲಿದ್ದೇವೆ. ಅಂತಿಮ ನಿರ್ಧಾರವನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ತೆಗೆದುಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಸಭೆ
ನಾಗಪುರ ಶಿವಸೇನಾ ಪಕ್ಷದ ಮುಖ್ಯಸ್ಥ ಪ್ರಕಾಶ್ ಜಾಧವ್ ಕೂಡ ಸಂಜಯ್ ರಾವತ್ ವಾದಕ್ಕೆ ಬೆಂಬಲ ನೀಡಿದ್ದಾರೆ. “ಬಿಜೆಪಿ ಬಳಿಕ ಅತಿ ಹೆಚ್ಚಿನ ಸೀಟುಗಳನ್ನು ನಾವು ಗೆದ್ದಿದ್ದೆವು. ಇತರೆ ಪಾಲುದಾರರು ಗೆಲ್ಲಲು ಸಾಧ್ಯವಾಗಿದ್ದು ಐದು ಮಾತ್ರ. ನಮ್ಮ ಗೆಲುವಿನ ಸಂಭಾವ್ಯತೆ ಹೆಚ್ಚಿರುವ ಕಾರಣ ನಾವು ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸುವುದು ಖಚಿತ. ವಿದರ್ಭದಲ್ಲಿ ಕೂಡ ರಾಮ್‌ತೇಕ್ ಸೇರಿದಂತೆ, ನಾವು 2019ರಲ್ಲಿ ಸ್ಪರ್ಧಿಸಿದ್ದಷ್ಟೇ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ” ಎಂದು ಹೇಳಿದ್ದಾರೆ.
ಐಎನ್‌ಡಿಐಎ ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿರುವ ವರದಿಗಳನ್ನು ಸಂಜಯ್ ರಾವತ್ ಅವರು ಕೆಲವು ದಿನಗಳ ಹಿಂದೆ ತಳ್ಳಿಹಾಕಿದ್ದರು. ಆದರೆ 23 ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಅವರು ನೀಡಿರುವ ಹೇಳಿಕೆಯು, ಎಂವಿಎಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಅದರ ನಡುವೆ ಜ. 13- 14ರಂದು ಸೋನಿಯಾ ಗಾಂಧಿ, ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರು ದಿಲ್ಲಿಯಲ್ಲಿ ಸಭೆ ನಡೆಸಲಿದ್ದು, ಪಟ್ಟಿ ಅಂತಿಮಗೊಳಿಸುವ ನಿರೀಕ್ಷೆ ಇದೆ.