ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನನ್ನು ಸೋಲಿಸಲು ಶೆಟ್ಟರ್ ರಣತಂತ್ರ; ರಮೇಶ್ ಜಾರಕಿಹೊಳಿ ಸಾಥ್.?
ಬೆಳಗಾವಿ, ಏಪ್ರಿಲ್, 01: ಲೋಕಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಬಹುತೇಕ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ ಆಗಿದೆ. ಹಾಗೆಯೇ ಹೈ ವೋಲ್ಟೇಜ್ ಕಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೂ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಪೈಪೋಟಿ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಾಂಗ್ರೆಸ್‌ನಿಂದ ಮತ್ತೆ ಮರಳಿ ಬಿಜೆಪಿ ಗೂಡಿಗೆ ಸೇರಿದ್ದ ಜಗದೀಶ್ ಶೆಟ್ಟರ್ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಕೊನೇ ಗಳಿಗೆಯಲ್ಲಿ ಈ ಕ್ಷೇತ್ರದ ಟಿಕೆಟ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಘೋಷಣೆ ಮಾಡಿತು. ಆಗ ಶೆಟ್ಟರ್ ತುಸು ಮುನಿಸಿಕೊಂಡಿದ್ದು, ನಂತರ ಅವರ ಕಣ್ಣು ಹೋಗಿದ್ದೇ ಬೆಳಗಾವಿ ಕ್ಷೇತ್ರದ ಟಿಕೆಟ್ ಮೇಲೆ.
ಕೊನೆಗೂ ಬೆಳಗಾವಿ ಬಿಜೆಪಿ ಟಿಕೆಟ್ ಅನ್ನು ಜಗದೀಶ್ ಶೆಟ್ಟರ್‌ಗೆ ಘೋಷಣೆ ಮಾಡಲಾಯಿತು. ಇನ್ನು ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಕಣದಲ್ಲಿದ್ದಾರೆ. ಇದೀಗ ಬೆಳಗಾವಿಯಲ್ಲಿ ಬಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿ ಜೊತೆ ಸಾಹುಕಾರ ರಮೇಶ್ ಜಾರಕಿಹೊಳಿ ಫೀಲ್ಡಿಗಿಳಿದಿದ್ದು, ಅವರು ಜಗದೀಶ ಶೆಟ್ಟರ್ ಪರ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯನ್ನು ಜಗದೀಶ್ ಶೆಟ್ಟರ್ ಭೇಟಿ ಮಾಡಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಶೆಟ್ಟರ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನನ್ನ ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಹೀಗೆ ಜಗದೀಶ್ ಶೆಟ್ಟರ್ ಗೋಕಾಕ್ ಮತ್ತು ಅರಭಾವಿ ಎರಡು ಮತಕ್ಷೇತ್ರದಲ್ಲಿ ಮತಗಳನ್ನು ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಇನ್ನು ಕಳೆದ ಎರಡು ದಿನದ ಹಿಂದೆ ಗೋಕಾಕ್, ಅರಭಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಪರ ಪ್ರಚಾರಕ್ಕಿಳಿದಿದ್ದರು.