ಅಸೌಖ್ಯದಿಂದ ಶಾಲಾ ಬಾಲಕ ಸಾವು
ಗುತ್ತಿಗಾರು: ಅಸೌಖ್ಯದಿಂದ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ದೇವಚಳ್ಳ ಗ್ರಾಮದಲ್ಲಿ ಸಂಭವಿಸಿದೆ.
ಇಲ್ಲಿನ ತಳೂರು ನಿವಾಸಿ ಚಂದ್ರಶೇಖರ ಅವರ ಪುತ್ರ, ಸ.ಹಿ.ಪ್ರಾ ಶಾಲೆ ದೇವಚಳ್ಳ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಲಾಸ್ ಟಿ. ಮೃತ ಬಾಲಕ.
ವಿಲಾಸ್ ಮಂಗಳವಾರ ಬೆಳಗ್ಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವಿಲಾಸ್ ಮೃತಪಟ್ಟಿದ್ದಾನೆ. ಮೃತ ವಿಲಾಸ್ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾನೆ.
Sullia ಸ್ಕಾರ್ಪಿಯೋ ಢಿಕ್ಕಿ: ಕಾರ್ಮಿಕ ಸಾವು
ಸುಳ್ಯ: ಸ್ಕಾರ್ಪಿಯೋ ಢಿಕ್ಕಿ ಹೊಡೆದು ಪಾದಚಾರಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ಸಮೀಪದ ಅಡ್ಕಾರಿನಲ್ಲಿ ಸಂಭವಿಸಿದೆ.
ಹುಬ್ಬಳ್ಳಿ-ಧಾರವಾಡ ಮೂಲದ ಕಾರ್ಮಿಕ ಅಣ್ಣಪ್ಪ (40) ಮೃತಪಟ್ಟವರು. ಕಾಸರಗೋಡು ಬಂದ್ಯಡ್ಕದ ಅನಿಲ್ ಅವರು ಕಾರಿನಲ್ಲಿ ಉಡುಪಿಯಿಂದ ಊರಿಗೆ ಮರಳುವ ವೇಳೆ ಅಡ್ಕಾರಿನಲ್ಲಿ ನಿಯಂತ್ರಣ ತಪ್ಪಿ ಪಾದಚಾರಿಗೆ ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಅಣ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂವರು ಮೃತಪಟ್ಟಿದ್ದ ಸ್ಥಳ
ಕೆಲವು ದಿನಗಳ ಹಿಂದೆ ಇಲ್ಲಿಗೆ ಸಮೀಪದಲ್ಲೇ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಢಿಕ್ಕಿಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಇನ್ನೊಂದು ಕಾರ್ಮಿಕ ಜೀವ ಅಪಘಾತಕ್ಕೆ ಬಲಿಯಾಗಿದೆ.