ಸಲಾರ್ ಚಿತ್ರದ ನಂತರ ಅಧಿಕೃತವಾಗಿ ‘ಕೆಜಿಎಫ್ 3’ ಘೋಷಣೆ ಮಾಡಿದ ಹೊಂಬಾಳೆ ಫಿಲ್ಮ್ಸ್..!
ಸಲಾರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯ ಜೊತೆಗೆ ಮತ್ತೊಂದು ಮಹತ್ವದ ಸುದ್ದಿಯನ್ನೂ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನೀಡಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ 3 (KGF 3) ಸಿನಿಮಾವನ್ನೂ ನಿರ್ಮಾಣ ಮಾಡುವುದಾಗಿ ಅದು ತಿಳಿಸಿದೆ. ಸಲಾರ್ ಸಿನಿಮಾದ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಬರೆದುಕೊಂಡಿದೆ.
ಕೆಜಿಎಫ್ 3 ಸಿನಿಮಾ ಮುಂಬರುವ ದಿನಗಳಲ್ಲಿ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಅಧಿಕೃತವಾಗಿ ಯಾರೂ ಅದನ್ನು ಹೇಳುವ ಪ್ರಯತ್ನ ಮಾಡಿರಲಿಲ್ಲ. ಸಲಾರ್ ನಂತರವೇ ಈ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸುಳಿವು ಎನ್ನುವಂತೆ ಕೆಜಿಎಫ್ 3 ಚಿತ್ರದ ಬಗ್ಗೆ ನಿರ್ಮಾಣ ಸಂಸ್ಥೆ ಪ್ರಸ್ತಾಪಿಸಿದೆ.
ಪ್ರಶಾಂತ್ ನೀಲ್ (Prashant Neel) ಮತ್ತು ಯಶ್ (Yash) ಕಾಂಬಿನೇಷನ್ ನ ಕೆಜಿಎಫ್ ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿತು. ಕನ್ನಡ ಸಿನಿಮಾವೊಂದು ಆ ಪ್ರಮಾಣದಲ್ಲಿ ದುಡ್ಡು ಮಾಡಲು ಸಾಧ್ಯವಾ ಎನ್ನುವ ಅಚ್ಚರಿಯನ್ನೂ ಮೂಡಿತ್ತು. ಕೆಜಿಎಫ್ 1 ಮತ್ತು 2 ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸರಣಿ ಮುಂದುವರೆಯಲಿದೆ ಎನ್ನುವ ಸುಳಿವೂ ಕೂಡ ಇತ್ತು.
ಇದೀಗ ಪ್ರಶಾಂತ್ ನೀಲ್ ಸಲಾರ್ ಮುಗಿಸಿಕೊಂಡು, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಹಾಗಾಗಿ ಕೆಜಿಎಫ್ 3 ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ.
ಶಾರುಖ್ ಸಿನಿಮಾ ಎದುರೇ ಸಲಾರ್ ರಿಲೀಸ್ : ಡೇಟ್ ಘೋಷಿಸಿದ ಹೊಂಬಾಳೆ ಫಿಲ್ಮ್ಸ್
ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಸಲಾರ್ ಯಾವಾಗ ರಿಲೀಸ್ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ನಿರ್ಮಾಣ ಸಂಸ್ಥೆಯೇ (Hombale Films) ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 22 ರಂದು ವಿಶ್ವದಾದ್ಯಂತ ಸಲಾರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳೇ ಹೇಳಿಕೊಂಡಿವೆ.
ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.
ಅಂದುಕೊಂಡಂತೆ ಆಗಿದ್ದರೆ, ಸೆಪ್ಟೆಂಬರ್ 28ರಂದು ಸಲಾರ್ (Salaar) ಸಿನಿಮಾ ರಿಲೀಸ್ ಆಗಬೇಕಿತ್ತು. ಈ ದಿನಾಂಕವನ್ನು ಘೋಷಿಸಿಯೂ ಆಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ರಿಲೀಸ್ ಆಗಲಿಲ್ಲ. ಮುಂದಿನ ದಿನಾಂಕವನ್ನೂ ಹೊಂಬಾಳೆ ಫಿಲ್ಮ್ಸ್ ಘೋಷಿಸುವುದಾಗಿ ತಿಳಿಸಿತ್ತು ಅದರಂತೆ ಇಂದು ದಿನಾಂಕ ಘೋಷಣೆ ಮಾಡಿದೆ.
ಈಗಾಗಲೇ ಒಂದರ ಹಿಂದೆ ಒಂದು ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ ಶಾರುಖ್ ಖಾನ್, ಪಠಾಣ್ ಮತ್ತು ಜವಾನ್ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ. ಈ ಗೆಲುವಿನ ನಂತರ ಡಂಕಿ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಹೊತ್ತಲ್ಲಿ ಸಲಾರ್ ಸಿನಿಮಾ ಕೂಡ ರಿಲೀಸ್ ( Release) ಆಗುತ್ತಿದೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹೇಗೆ ಕಮಾಯಿ ಮಾಡಲಿವೆ ಎಂದು ಕಾದು ನೋಡಬೇಕು.