ಸಚಿನ್ ಪೈಲಟ್- ಸಾರಾ ಅಬ್ದುಲ್ಲಾ ವಿಚ್ಛೇದನ? ಚುನಾವಣಾ ನಾಮಪತ್ರದಲ್ಲಿ ಮಾಹಿತಿ ಬಹಿರಂಗ...!
ಜೈಪುರ, ಅಕ್ಟೋಬರ್ 01: ರಾಜಸ್ಥಾನ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ರಾಜಸ್ಥಾನದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಕೆಲವು ಕುತೂಹಲಕರ ಸಂಗತಿಗಳು ಹೊರಬಿದ್ದಿವೆ.
ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮ್ಮ ಪತ್ನಿ ಸಾರಾ ಅಬ್ದುಲ್ಲಾ ಅವರಿಂದ ವಿಚ್ಛೇದನ ಪಡೆದಿರುವುದು ನಾಮಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.
ಇದರಲ್ಲಿ ನಿಖರವಾದ ವಿಚ್ಛೇದನದ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಇದರಿಂದ ಅವರ ವಿಚ್ಚೇದನದ ಕುರಿತು ಸಾರ್ವಜನಿಕವಾಗಿ ಮೊದಲ ಬಾರಿಗೆ ಬಹಿರಂಗವಾಗಿದೆ.
ಪೈಲಟ್ ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ಹೆಂಡತಿಯ ಹೆಸರಿನ ಜೊತೆಗೆ ‘ವಿಚ್ಛೇದಿತ’ ಎಂಬ ಪದವನ್ನು ವಿಶೇಷವಾಗಿ ಬಳಸಲಾಗಿದೆ. ಸಚಿನ್-ಸಾರಾ ದಂಪತಿಗಳು ಜನವರಿ 15, 2004 ರಂದು ವಿವಾಹವಾದರು. ಸಾರಾ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಮಗಳು. ಪಾರೂಕ್ ಅಬ್ದುಲ್ಲಾ ಅವರು ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ವಿವಾಹಕ್ಕೆ ಅಬ್ದುಲ್ಲಾ ಕುಟುಂಬದ ತೀವ್ರ ವಿರೋಧವಿತ್ತು.
ಸಚಿನ್- ಸಾರಾ ಮದುವೆಗೆ ಫಾರೂಕ್ ಅಬ್ದುಲ್ಲಾ ಹಾಜರಾಗಲಿಲ್ಲ. ಸಚಿನ್ ಅವರ ಕುಟುಂಬವು ಅಂತಿಮವಾಗಿ ಮದುವೆಯನ್ನು ಬೆಂಬಲಿಸಿತು ಎಂದು ತಿಳಿದುಬಂದಿದೆ. ಸಚಿನ್ ಮತ್ತು ಸಾರಾ ಲಂಡನ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದರು. ಸಚಿನ್ ಪೈಲಟ್ ಲಂಡನ್‌ನಲ್ಲಿ ಎಂಬಿಎ ಮಾಡುತ್ತಿದ್ದಾಗ ಸಾರಾ ಅವರನ್ನು ಭೇಟಿಯಾದರು. 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಉದ್ವಿಗ್ನತೆಯಿಂದಾಗಿ ಸಾರಾ ಅಬ್ದುಲ್ಲಾ ಅವರನ್ನು ಆಕೆಯ ತಂದೆ ಯುಕೆಗೆ ಕಳುಹಿಸಿದ್ದರು.
ಸಚಿನ್ ಪೈಲಟ್ ಮಂಗಳವಾರ ಟೋಂಕ್ ಅಸೆಂಬ್ಲಿ ಸ್ಥಾನದಿಂದ ನಾಮಪತ್ರ ಸಲ್ಲಿಸಿದರು. ಅವರ ಚುನಾವಣಾ ಅಫಿಡವಿಟ್‌ನಲ್ಲಿ ಸಂಗಾತಿಯ ವಿವರಗಳಿಗಾಗಿ ಇರುವ ಕಾಲಂನಲ್ಲಿ ‘ವಿಚ್ಛೇದನ’ ಎಂದು ನಮೂದಿಸಿದ್ದಾರೆ.
ಸಚಿನ್ ಪೈಲಟ್ ಮತ್ತು ಸಾರಾ ಅಬ್ದುಲ್ಲಾ ವಿಚ್ಛೇದನ ದೃಢಪಟ್ಟಿರುವುದು ಇದೇ ಮೊದಲು. ದಂಪತಿಗಳ ವಿಚ್ಛೇದನದ ಬಗ್ಗೆ ಊಹಾಪೋಹಗಳು ಇದ್ದರೂ, ಇಬ್ಬರೂ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಈ ದಂಪತಿಗೆ ಆರಾನ್ ಮತ್ತು ವೆಹಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಇಬ್ಬರು ಪುತ್ರರನ್ನು ‘ಅವಲಂಬಿತರು’ ಎಂದು ಉಲ್ಲೇಖಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪೈಲಟ್‌ರ ಸಂಪತ್ತಿನಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದು ಅಫಿಡವಿಟ್‌ನಿಂದ ತಿಳಿದುಬಂದಿದೆ. 2018 ರಲ್ಲಿ ಅವರ ಒಟ್ಟು ಆಸ್ತಿಯನ್ನು ಅಂದಾಜು ₹3.8 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಇತ್ತೀಚಿನ ಅಫಿಡವಿಟ್‌ನ ಪ್ರಕಾರ, 2023 ರ ವೇಳೆಗೆ ₹7.5 ಕೋಟಿಯಾಗಿರುವುದು ಬಹಿರಂಗಗೊಂಡಿದೆ. ಪೈಲಟ್ 2018 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಯೂನುಸ್ ಖಾನ್ ವಿರುದ್ಧ ಟೋಂಕ್ ಕ್ಷೇತ್ರದಿಂದ ಸಚಿನ ಸ್ಪರ್ಧಿಸಿದ್ದರು. ಆಗ 54,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮಂಗಳವಾರ ನಾಮಪತ್ರ ಸಲ್ಲಿಸುವ ಮುನ್ನ ಸಚಿನ್ ಪೈಲಟ್ ಅವರು ಭೂತೇಶ್ವರ ಮಹಾದೇವ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದರ ನಂತರ, ಅವರು ತಮ್ಮ ಬೆಂಬಲಿಗರೊಂದಿಗೆ ಬಡಾ ಕುವಾನ್‌ನಿಂದ ಟೋಂಕ್ ಸಿಟಿಯ ಪಟೇಲ್ ಚೌಕ್‌ವರೆಗೆ ಮೆರವಣಿಗೆಯನ್ನು ನಡೆಸಿದರು. ಈ ಪ್ರದೇಶದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು.
ಸಾರಾ ದೆಹಲಿಯ ಎನ್‌ಜಿಒ ವಲಯದಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ವರದಿಯಾಗಿದೆ. ಆಕೆ ತಮ್ಮ ಬಾಲ್ಯವನ್ನು 12 ನೇ ವಯಸ್ಸಿನವರೆಗೆ ಕಾಶ್ಮೀರದಲ್ಲಿ ಕಳೆದರು ಎಂದು ಗೊತ್ತಾಗಿದೆ. ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯು ನವೆಂಬರ್ 25 ರಂದು ನಡೆಯಲಿದ್ದು, ಫಲಿತಾಂಶವನ್ನು ಡಿಸೆಂಬರ್ 3 ರಂದು ಪ್ರಕಟಿಸಲಾಗುವುದು.