S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ (S M Krishna) ನಿಧನರಾಗಿದ್ದಾರೆ. ಅವರ 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ (92) ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ಇಂದು ಬೆಳಗಿನ ಜಾವ 2 ಗಂಟೆಗೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಕೂಡಲೇ ವೈದ್ಯರು ಮನೆಗೆ ಆಗಮಿಸಿದ್ದರು. ಬೆಳಗ್ಗೆ 3:30ಕ್ಕೆ ವೈದ್ಯರು ಎಸ್‌ಎಂ ಕೃಷ್ಣ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದರು. ಇಂದು ಬೆಳಗ್ಗೆ ಮನೆಯಿಂದ ಚೆಕಪ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಇಂದು ಇಡೀ ದಿನ ಸದಾಶಿವನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 1 ಗಂಟೆಯ ಬಳಿಕ ಹುಟ್ಟೂರು ಮದ್ದೂರಿಗೆ ಪಾರ್ಥಿವ ಶರೀರವನ್ನು ಶಿಫ್ಟ್ ಮಾಡಲಾಗುತ್ತದೆ.
ಸದಾಶಿವನಗರ ಎಸ್ ಎಂ ಕೃಷ್ಣ (S M Krishna) ಮನೆ ಬಳಿ ಪೊಲೀಸರ ಅಲರ್ಟ್ ಆಗಿದ್ದು, ನಿವಾಸದ ಅಕ್ಕಪಕ್ಕ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಭದ್ರತೆ ಕಲ್ಪಿಸಿದ್ದಾರೆ.
ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ 1932 ರ ಮೇ 1ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಎಸ್ಎಂ ಕೃಷ್ಣ ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್ನಿಂದಲೂ ಪದವಿ ಪಡೆದಿದ್ದರು.
1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಗೆಲುವು ಸಾಧಿಸಿದ ಕೃಷ್ಣ ಆ ಮೂಲಕ ಚುನಾವಣಾ ರಾಜಕೀಯ ಜೀವನಕ್ಕೆ ಧುಮುಕಿದ್ದರು. ಆ ಬಳಿಕ ಅವರು ‘ಪ್ರಜಾ ಸೋಷಿಯಲಿಸ್ಟ್ ಪಕ್ಷ’ಕ್ಕೆ ಸೇರಿದ್ದರು. ಆದರೆ 1967 ರ ಚುನಾವಣೆಯಲ್ಲಿ ಮದ್ದೂರಿನಿಂದ ಕಾಂಗ್ರೆಸ್‌ನ ಎಂಎಂ ಗೌಡ ವಿರುದ್ಧ ಸೋಲನುಭವಿಸಿದ್ದರು. 1968 ರಲ್ಲಿ ಹಾಲಿ ಸಂಸದರು ನಿಧನರಾದಾಗ ಅವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ರಾಷ್ಟ್ರ ರಾಜಕೀಯಕ್ಕೆ ಅಡಿಯಿಟ್ಟರು.
1968 ರ ಉಪಚುನಾವಣೆಯ ನಂತರ ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದರು. 1971 ಮತ್ತು 1980 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗಳನ್ನು ಗೆದ್ದಿದ್ದರು. ಆಗ ಮಂಡ್ಯವನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿಸುವಲ್ಲಿ ಎಸ್ಎಂ ಕೃಷ್ಣ ಪಾತ್ರ ಪ್ರಮುಖವಾದದ್ದಾಗಿತ್ತು.
ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ನಲ್ಲೇ ಪ್ರಬಲ ನಾಯಕರಾಗಿದ್ದ ಎಸ್ಎಂ ಕೃಷ್ಣ, ರಾಜಕೀಯ ಜೀವನದ ಕೊನೆಗಾಲದಲ್ಲಿ, 2017 ರ ಜನವರಿ 29 ರಂದು ಕಾಂಗ್ರೆಸ್ ದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2017 ರ ಮಾರ್ಚ್ನಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು.
ಲಭ್ಯವಾಗಿರುವ ಮಾಹಿತಿ ಪ್ರಕಾರ ನಾಳೆ ಬೆಳಗ್ಗೆ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೋಮನಹಳ್ಳಿಗೆ ತರಲಾಗುತ್ತದೆ. ಇಲ್ಲಿಯ ಶಾಲೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ.