ರೌಡಿಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ!
ಬೆಂಗಳೂರು: ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಯಾಗಿದ್ದಾನೆ. ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತವನ ಗ್ಯಾಂಗ್ ಭೀಕರವಾಗಿ ಆತನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರದ (Parappana Agrahara) ಬಳಿ ನಡೆದಿದೆ.
ಮಹೇಶ್ ರಾತ್ರಿ 9:20ರ ವೇಳೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇದ್ದ. ಬಳಿಕ 9:45ರ ಸಮಯಕ್ಕೆ ಹೊಸೂರ್ ರೋಡ್ ಸಿಗ್ನಲ್ ಬಳಿಗೆ ಬಂದಿದ್ದಾನೆ. ಈ ವೇಳೆ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಜನರು ಗುಂಪು ಮಚ್ಚು ಬೀಸಿದ್ದಾರೆ. ಈ ವೇಳೆ ಮಹೇಶ್ ಕಾರಿನಿಂದ ಇಳಿದು ವಾಪಾಸ್ ಹಿಂದಕ್ಕೆ ಓಡಲು ಪ್ರಯತ್ನ ಪಟ್ಟಿದ್ದಾನೆ. ಈ ವೇಳೆ ಸುಮಾರು ನೂರು ಮೀಟರ್ನಷ್ಟು ದೂರ ಅಟ್ಟಾಡಿಸಿ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ.
2021 ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯ ಮದನ್ ಅಲಿಯಾಸ್ ಪಿಟೀಲ್ನನ್ನು ಇದೇ ಸಿದ್ದಾಪುರ ಮಹೇಶ್ ಮತ್ತವನ ಗ್ಯಾಂಗ್ ಬನಶಂಕರಿ ದೇವಾಲಯದ ಬಳಿ ಅಡ್ಡಹಾಕಿ ಕೊಚ್ಚಿ ಕೊಲೆ ಮಾಡಿದ್ದರು. ಇದೇ ಕಾರಣಕ್ಕೆ ನಾಗನಿಗೆ ಈ ಮಹೇಶ್ನನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದ. ಹಾಗೆ ನಾಗನನ್ನು ಸಹ ಹೊಡೆಯೋದಕ್ಕೆ ಮಹೇಶ್ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಇದರ ನಡುವೆಯೇ ಜೂನ್ನಲ್ಲಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದ ಮಹೇಶ್ ತಾನು ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗಿದ್ದ. ಬಳಿಕ ನಾಗನಿಂದ ಜೀವ ಭಯ ಇದೆ ಎಂದು ತಿಳಿದು ಹಳೆಯ ಕೇಸ್ನಲ್ಲಿ ಮತ್ತೆ ಜೈಲು ಸೇರಿದ್ದ.
ಮಹೇಶ್ನ ಕೊಲೆಯಾಗುವಾಗ ಸ್ಕೂಟರ್ನಲ್ಲಿ ಆತನ ಪತ್ನಿ ಕಾರಿನ ಹಿಂದೆಯೇ ಬರುತ್ತಿದ್ದಳು. ಇದೇ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಅಲ್ಲದೇ ಮಗ ಬರುತ್ತಿದ್ದಾನೆ ಎಂದು ಆತನ ತಾಯಿ ಅವನಿಗೆ ಇಷ್ಟವಾದ ಮಟನ್ ಚಾಪ್ಸ್ ಮಾಡುತ್ತಿದ್ದಳು. ಇದೇ ವೇಳೆ ಆತ ಕೊಲೆಯಾಗಿರುವುದಾಗಿ ಕರೆ ಬಂದಿದೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ.
ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ – ಟೆಕ್ಕಿ ಅರೆಸ್ಟ್
ಬೆಂಗಳೂರು: ಟೆಕ್ಕಿಯೋರ್ವ (Techie) ಪ್ರೀತಿಸಿದ ಯುವತಿಯ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಮೈಕೋ ಲೇಔಟ್ನಲ್ಲಿ ನಡೆದಿದೆ.
ರವಿ ಕುಮಾರ್ (28) ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಆತ ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಯುವತಿ ರವಿಯ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ.
ಇದರಿಂದ ಕೋಪಗೊಂಡಿದ್ದ ರವಿಗೆ ಯುವತಿಯ ಮೇಲೆ ಅನುಮಾನ ಮೂಡಿತ್ತು. ಇದರಿಂದ ಪ್ಲಾನ್ ಮಾಡಿ ಆಗಸ್ಟ್ 2ರಂದು ಪ್ರೇಯಸಿಯನ್ನ ತನ್ನ ಪಿಜಿ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಕಬ್ಬಿಣದ ರಾಡ್ನಿಂದ ಯುವತಿಯ ತಲೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಯುವತಿಯನ್ನು ಸ್ಥಳೀಯರು ನಿಮ್ಹಾಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ರವಿ ಕುಮಾರ್ನನ್ನು ಪೊಲೀಸರು (Police) ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.