ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಡಿಸೆಂಬರ್ 22ರಿಂದ 27ರವರೆಗೆ ನಿರ್ಬಂಧ ; ಯಾವ್ಯಾವೂ? ಇಲ್ಲಿದೆ ಮಾಹಿತಿ
ಚಿಕ್ಕಮಗಳೂರು, ಡಿಸೆಂಬರ್ 14: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ (Baba Budan giri) ದರ್ಗಾ, ದತ್ತಪೀಠದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ದತ್ತಜಯಂತಿ ನಡೆಯಲಿರುವ ಕಾರಣ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ (Chikkamagaluru Tourist spots) ನಿರ್ಬಂಧ ಹೇರಲಾಗಿದೆ. 6 ದಿನ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಡಿಸೆಂಬರ್ 22ರಿಂದ 27ರವರೆಗೆ ಪ್ರವಾಸಿ ತಾಣಗಳಿಗೆ ನಿರ್ಬಂಧ ಇರಲಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಡಿಸೆಂಬರ್ 26ಕ್ಕೆ 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಡಿಸೆಂಬರ್ 23, 24 ವಾರಾಂತ್ಯ ಇದೆ. 25ರಂದು ಸೋಮವಾರ ಕ್ರಿಸ್ಮಸ್ ಪ್ರಯುಕ್ತ ಸಾರ್ವಜನಿಕ ರಜೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಅನೇಕರು ಪ್ರವಾಸಕ್ಕೆ ಪ್ಲ್ಯಾನ್ ಮಾಡಿರುವ ಸಾಧ್ಯತೆ ಇದ್ದು, ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಚಿಸಿರುವ ಸಾಧ್ಯತೆಯೂ ಇದೆ. ಹೀಗಾಗಿ ಜಿಲ್ಲಾಡಳಿತ ಮುಂಚಿತವಾಗಿಯೇ ಮಾಹಿತಿ ನೀಡಿದೆ.
ಈ ಮಧ್ಯೆ, ವಿವಾದದಿಂದಲೇ ಸದ್ದು ಮಾಡಿರುವ ದತ್ತಜಯಂತಿ ಕಾರ್ಯಕ್ರಮ ನಡೆಯುವ ದತ್ತಪೀಠದಲ್ಲಿ ಇತ್ತೀಚೆಗೆ ನಡೆದ ಹುಣ್ಣಿಮೆ ಪೂಜೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಪಂಪಾ ಸರೋವರಕ್ಕೆ ಬರುವ ಪ್ರವಾಸಿಗರೇ ಎಚ್ಚರ! ಜೆಸ್ಕಾಂ ನಿರ್ಲಕ್ಷ್ಯಕ್ಕೇ ಬಾಯ್ ತೆರೆದು ಕಾಯುತ್ತಿವೆ ಅಪಾಯಕಾರಿ ವಿದ್ಯುತ್ ವೈಯರ್ಗಳು
ಕೊಪ್ಪಳ, ಡಿ.14: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ (Anjanadri Betta), ಪಂಪಾ ಸರೋವರಕ್ಕೆ (Pampa Sarovar) ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿ, ಮತ್ತು ರಾಮನಿಗಾಗಿ ಕಾದಿದ್ದ ಶಬರಿಯ ಗುಹೆಯ ಸಮೀಪ ಪಂಪಾ ಸರೋವರವಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಆದರೆ ಪಂಪಾ ಸರೋವರಕ್ಕೆ ಬರುವ ಭಕ್ತರ ಜೀವಕ್ಕೆ ಗ್ಯಾರಂಟಿ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ವಿದ್ಯುತ್ ವೈಯರ್ಗಳು ಎಲ್ಲೆಂದರಲ್ಲಿ ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಪಂಪಾ ಸರೋವರ ಸುತ್ತಮುತ್ತ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಹೈಮಾಸ್ಕ್ ದೀಪ ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಬೇಕಾಬಿಟ್ಟಿಯಾಗಿ ವಿದ್ಯುತ್ ವೈಯರ್ಗಳನ್ನು ಹಾಕಲಾಗಿದೆ. ಅನೇಕ ಕಡೆ ಕಲ್ಲುಗಳನ್ನು ಇಟ್ಟು ವಿದ್ಯುತ್ ಸಂಪರ್ಕ ಇರುವ ವೈಯರ್ಗಳನ್ನು ಬಿಡಲಾಗಿದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಜನ ಬರ್ತಾರೆ. ಯಾರಾದ್ರು ವಿದ್ಯುತ್ ತಂತಿಗಳನ್ನು ಗಮನಿಸದೇ ಹೋದ್ರೆ ಅಪಾಯ ಗ್ಯಾರಂಟಿ ಎಂಬ ಸ್ಥಿತಿಯಿದೆ. ಇನ್ನು ವಿದ್ಯುತ್ ವೈಯರ್ ಗಳು ಕೈ ಸಿಗುವಂತಿವೆ. ನಡೆದುಕೊಂಡು ಹೋಗುವಾಗ ಕಾಲಿಗೆ ತಾಕುತ್ತಿವೆ. ಕೆಲವೆಡೆ ವೈಯರ್ ಕಟ್ ಆಗಿದ್ದರಿಂದ ಅಲ್ಲಿ ಯಾರಾದ್ರು ಗಮನಿಸದೇ ಕಾಲಿಟ್ಟರೇ, ಮಕ್ಕಳು ಮುಟ್ಟಿದ್ರೆ ಜೀವ ಹೋಗೋದು ಗ್ಯಾರಂಟಿ.
ಪಂಪಾ ಸರೋವರ ಪುರಾಣ ಪ್ರಸಿದ್ದಿಯನ್ನು ಹೊಂದಿದೆ. ದೇಶದಲ್ಲಿ ಐದು ಪುಣ್ಯ ಸರೋವರಗಳಿದ್ದು ಅದರಲ್ಲಿ ಪಂಪಾ ಸರೋವರ ಕೂಡಾ ಒಂದು. ಪಂಪಾ ಸರೋವರದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಭಕ್ತರು, ಪ್ರವಾಸಿಗರು ಬರುತ್ತಾರೆ. ಆದ್ರೆ ಮುಜರಾಯಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಭಕ್ತರ ಜೀವಕ್ಕೆ ಅಪಾಯ ಎದುರಾಗಿದೆ.
ಈ ಬಗ್ಗೆ ಸಾರ್ವಜನಿಕರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ, ಜೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಅನೇಕರು ಬಂದು ಇದೇ ವಿದ್ಯುತ್ ವೈಯರ್ ಗಳನ್ನು ತುಳಿದುಕೊಂಡೇ ಅಡ್ಡಾಡುತ್ತಿದ್ದಾರೆ. ವೈಯರ್ ಕಟ್ ಆಗಿರುವ ಕಡೆ ಕಾಲಿಟ್ಟರೇ ಜೀವ ಹೋಗುತ್ತೆ ಎಂದು ಸ್ಥಳೀಯ ನಿವಾಸಿ ಮಾರುತಿ ಆತಂಕ ಹೊರ ಹಾಕಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗಂಗಾವತಿ ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.