ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನ ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತನಾದ ಎಲಾನ್ ಮಸ್ಕ್..!
ವಾಷಿಂಗ್ಟನ್: ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ (Worlds Richest Person) ಹೊರಹೊಮ್ಮಿದ್ದಾರೆ. LMVH ಷೇರುಗಳು ಕುಸಿತ ಕಂಡ ನಂತರ ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ (Bernard Arnault) ಅವರನ್ನ ಹಿಂದಿಕ್ಕಿ, ಮಸ್ಕ್ ನಂ.1 ಸ್ಥಾನಕ್ಕೇರಿದ್ದಾರೆ.
ಬುಧವಾರ ಪ್ಯಾರಿಸ್‌ನ ವಹಿವಾಟಿನಲ್ಲಿ ಅರ್ನಾಲ್ಟ್‌ನ LMVH ಷೇರುಗಳು 2.6% ಕಡಿಮೆಯಾಗಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅಲ್ಲದೇ ಎಲ್‌ವಿಎಂಹೆಚ್ ಷೇರುಗಳು ಕಳೆದ ಏಪ್ರಿಲ್‌ನಿಂದ ಸುಮಾರು 10 ಪ್ರತಿಶತದಷ್ಟು ಕುಸಿತ ಕಂಡಿದೆ. ಇದರಿಂದ ಒಂದೇ ದಿನದಲ್ಲಿ ಅರ್ನಾಲ್ಟ್‌ನ ನಿವ್ವಳ ಮೌಲ್ಯದಲ್ಲಿ ಏಕಾಏಕಿ 11 ಶತಕೋಟಿ ಡಾಲರ್‌ನಷ್ಟು ಸಂಪತ್ತು ಕರಗಿದೆ.
2022ರ ಡಿಸೆಂಬರ್‌ನಲ್ಲಿ ಎಲಾನ್ ಮಸ್ಕ್ ಅವರ ಟೆಸ್ಲಾ (Tesla) ಷೇರು ಮೌಲ್ಯ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಮಸ್ಕ್ನ ನಿವ್ವಳ ಮೌಲ್ಯವು 200 ಶತಕೋಟಿ ಡಾಲರ್‌ನಷ್ಟು ಕಡಿಮೆಯಾಗಿತ್ತು. ಏಕೆಂದರೆ ಮಸ್ಕ್ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿ, ಅದರಲ್ಲೇ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಆಗ ಮೊದಲ ಬಾರಿಗೆ ಬ್ರಾಂಡ್ ಲೂಯಿ ವಿಟಾನ್ ಮೂಲ ಕಂಪನಿಯಾದ LMVH ಸಿಇಒ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ನಂ.1 ಸ್ಥಾನದಿಂದ ಹಿಂದಿಕ್ಕಿದ್ದರು.