ಖ್ಯಾತ ಕೊರಿಯೋಗ್ರಾಫರ್ ರಾಕೇಶ್ ಮಾಸ್ಟರ್ ನಿಧನ
ಹೈದರಾಬಾದ್: ಟಾಲಿವುಡ್ ಸಿನಿಮಾರಂಗದ ಹೆಸರಾಂತ ನೃತ್ಯ ಸಂಯೋಜಕ ರಾಕೇಶ್ ಮಾಸ್ಟರ್ (53) ಭಾನುವಾರ (ಜೂ.18 ರಂದು) ನಿಧನರಾಗಿದ್ದಾರೆ.
ಕಳೆದ ವಾರವಷ್ಟೇ ವಿಶಾಖಪಟ್ಟಣಂನಲ್ಲಿ ಪ್ರಾಜೆಕ್ಟ್ ವೊಂದರ ಶೂಟಿಂಗ್ ಮುಗಿಸಿ ಹೈದರಾಬಾದ್‌ಗೆ ಮರಳಿದ್ದರು. ಆ ಬಳಿಕ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೊದಲೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯಗೊಂಡು ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋಗಳಾದ ಆಟ ಮತ್ತು ಧೀ ನಲ್ಲಿ ಭಾಗವಹಿಸಿದ ಬಳಿಕ ಖ್ಯಾತಿಗಳಿಸಿದ ಅವರು ಟಾಲಿವುಡ್ ರಂಗದಲ್ಲಿ ಅವಕಾಶ ಪಡೆದುಕೊಂಡರು. ಸುಮಾರು 1500ಕ್ಕೂ ಹೆಚ್ಚಿನ ಹಾಡುಗಳಿಗೆ ಅವರು ಕೊರಿಯೋಗ್ರಾಫಿ ಮಾಡಿದ್ದಾರೆ.
ʼವೆಂಡಿ ಥಿಯರ್ಕು ಮಾ ವಂದಾಲುʼ, ʼಚಂದಮಾಮ ಕಣ್ಣ ಚಲನಿವಡೆʼ, ʼಲಾಹಿರಿ ಲಾಹಿರಿ ಲಾಹಿರಿʼ, ʼದೇವದಾಸುʼ, ʼಚಿರುನಾವುತ್ತುʼ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಕೊರಿಯೋಗ್ರಾಫಿ ಮಾಡಿದ್ದಾರೆ.
ಅವರ ಹಠಾತ್ ನಿಧನಕ್ಕೆ ಟಾಲಿವುಡ್ ಪ್ರೇಕ್ಷಕರು ಹಾಗೂ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.