ಧಾರ್ಮಿಕ ಕಾರ್ಯಕ್ರಮದ ಪೆಂಡಾಲ್ ಕುಸಿದು ಮಹಿಳೆ ಮೃತ್ಯು
ಗಂಗಾವತಿ: ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಆಗಮಿಸಿದ ಭಕ್ತರಿಗೆ ಅಡುಗೆ ತಯಾರಿಸುತ್ತಿದ್ದ ಮಹಿಳೆಯ ಮೇಲೆ ಪೆಂಡಾಲ್ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮುಸ್ಟೂರು ಕ್ಯಾಂಪ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಮುಸ್ಟೂರು ಕ್ಯಾಂಪ್ ನಲ್ಲಿ ಗ್ರಾಮಸ್ಥರು ನಾಲ್ಕು ದಿನಗಳ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಆಯೋಜಿಸಿದ್ದರು, ಶುಕ್ರವಾರ ಕೊನೆಯ ದಿನ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲು ಕಾರ್ಯಕ್ರಮದ ವೇದಿಕೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಪೆಂಡಾಲ್ ಬಿರುಗಾಳಿಗೆ ಸಿಲುಕಿ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಪರಿಣಾಮ ಅಡುಗೆ ಕಾರ್ಯದಲ್ಲಿ ನಿರತರಾಗಿದ್ದ ಮಹಿಳೆ ಅಂಜಿನಮ್ಮ( 51) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಾಮೀದಾಬೀ(48) ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ. ಶೃತಿ(23),ದುರುಗಮ್ಮ,(40),ಶಾರದ(30) ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸಹೋದರ ವೆಂಕಟೇಶ ತಂಗಡಗಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಕ್ಷೇಮ ವಿಚಾರಿಸಿದರು. ನಂತರ ತಹಶೀಲ್ದಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿ, ಸರಕಾರದಿಂದ ಪರಿಹಾರದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.