ಆಸ್ಪತ್ರೆ ಒಳಗೆ ಕೆಲಸದೊಂದಿಗೆ ವೈದ್ಯ ವಿದ್ಯಾರ್ಥಿಗಳ ರೀಲ್ಸ್ ವೈರಲ್; ಅಮಾನತು ಜೊತೆಗೆ 10 ದಿನ ಹೆಚ್ಚುವರಿ ಸೇವೆಯ ದಂಡ..!
ಈಗ್ ರೀಲ್ಸ್ ಹುಚ್ಚು ಎಲ್ಲೆಡೆ ಹಬ್ಬಿದೆ. ಸಾಮಾನ್ಯರಿಂದ ಅತಿಗಣ್ಯರು ತಮ್ಮ ಬದುಕಿನ ಕ್ಷಣಗಳಿಗೆ ರೀಲ್ಸ್ ರೂಪ ನೀಡಿ ಅದನ್ನು ಸಾಮಾಜಿಕ ಮಾಧ್ಯಮಗಳಿಗೆ ಹರಿಬಿಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಸಹಸ್ರಾರು ಫಾಲೋವರ್‌ಗಳೂ ಇದ್ದಾರೆ. ಆದರೆ ಸೇವೆಯಲ್ಲಿದ್ದ ಕಿರಿಯ ವೈದ್ಯರೂ ತಮ್ಮ ವೃತ್ತಿಯ ಭಾಗವನ್ನೇ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮಗಳಿಗೆ ಹಾಕಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗೆ ರೀಲ್ಸ್ ಮಾಡಿದ ಕಿರಿಯ ವೈದ್ಯರನ್ನು ಅಮಾನತಿಗೊಳಿಸಲಾಗಿದ್ದು, ಕೆಲವರಿಗೆ ಹತ್ತು ದಿನ ಹೆಚ್ಚುವರಿ ರೋಗಿಗಳ ಸೇವೆ ಮಾಡುವ ಶಿಕ್ಷೆಯನ್ನು ನೀಡಲಾಗಿದೆ.
A Day after @dineshgrao suspended a Doctor for pre wedding shoot in bharamasagara at #chitradurga, 38 #Medical students suspended from #GIMS of Gadag for shooting reels in hospital.
— Madhu M (@MadhunaikBunty) February 10, 2024
Good work @HKPatilINC @dineshgrao pic.twitter.com/tebWlXVknP
ಇದು ನಡೆದಿರುವುದು ಗದಗದಲ್ಲಿ. ಗದಗದ ಹೊರ ವಲಯದಲ್ಲಿ ವಿಶಾಲ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ( GIMS) ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿದೆ. ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆಯುವ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯಲ್ಲಿಯೇ ಪ್ರಾಯೋಗಿಕ ತರಗತಿಗಳಲ್ಲಿ ಭಾಗಿಯಾಗಬೇಕು. ಹೌಸ್‌ಮೆನ್‌ಶಿಪ್( HousemenShip) ಎಂದು ಕರೆಯುವ ಈ ತರಬೇತಿಯಲ್ಲಿ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಈ ವೇಳೆ 38 ವಿದ್ಯಾರ್ಥಿಗಳು ತಾವು ತರಬೇತಿಯಲ್ಲಿ ತೊಡಗಿದ್ದ ವಿಡಿಯೋಗಳನ್ನು ಮಾಡಿ ರೀಲ್ಸ್ ಮಾಡಿದ್ದಾರೆ. ಕಾರಿಡಾರ್ ನ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದಾರೆ ಅದರಲ್ಲೂ ರೋಗಿಗಳೊಂದಿಗೆ ಇರುವುದು, ಒಬ್ಬರನ್ನು ಸಲೈನ್ ಬಾಟೆಲ್‌ನಲ್ಲಿ ಕರೆ ತರುವಾಗಲೂ ರೀಲ್ಸ್ ಮಾಡಿದ್ಧಾರೆ.
ಇವುಗಳನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಕನ್ನಡ ಹಾಗೂ ಹಿಂದಿಯಲ್ಲಿ ಈ ವಿಡಿಯೋಗಳಿದ್ದವು. ಇದನ್ನು ಗಮನಿಸಿದ ನೆಟ್ಟಿಗರು ತೀವ್ರ ಆಕ್ರೋಶ ಹೊರ ಹಾಕಿದ್ದರು. ರೋಗಿಗಳೊಂದಿಗೆ ವೈದ್ಯರು ಚೆಲ್ಲಾಟವಾಡುವುದು, ಅದನ್ನು ವಿಡಿಯೋ ಮಾಡಿ ಬಿಡುವುದು ಒಳ್ಳೆಯದಲ್ಲ. ಇದರಿಂದ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಕಿರಿಕಿರಿಯಾಗುತ್ತದೆ. ಭಯವೂ ಆಗಬಹುದು ಎಂದು ಕೆಲವರು ಟೀಕಿಸಿದ್ದರು.
ಇದು ಗದಗ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಅವರ ಗಮನಕ್ಕೆ ಬರುತ್ತಿದ್ದಂತೆ ನೊಟೀಸ್ ಜಾರಿ ಮಾಡಿದ್ದರು.
ಇದು ನಿಜಕ್ಕೂ ದೊಡ್ಡ ತಪ್ಪು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಕಾಪಾಡಬೇಕು. ಅದರಲ್ಲೂ ವೈದ್ಯ ವಿದ್ಯಾರ್ಥಿಗಳು ಖಾಸಗಿ ವಿಚಾರಗಳನ್ನು ಈ ರೀತಿ ರೀಲ್ಸ್ ಮಾಡಿದ್ದು ಒಪ್ಪುವಂತದ್ದಲ್ಲ. ಅವರು ಆಸ್ಪತ್ರೆ ಹೊರಾವರಣದಲ್ಲಿ ಏನು ಮಾಡಿಕೊಂಡರೂ ನಾವು ಕೇಳುವುದಿಲ್ಲ. ಆದರೆ ಆಸ್ಪತ್ರೆ ಒಳಗೆ ಹೀಗೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು
ವಿದ್ಯಾರ್ಥಿಗಳ ಸ್ಪಷ್ಟನೆ ಏನು
ನಾವು ನಮ್ಮ ಪದವಿ ದಿನಾಚರಣೆಗಾಗಿ ಈ ರೀತಿ ರೀಲ್ಸ್ ಮಾಡಿಕೊಂಡಿದ್ದೇವೆ. ಯಾವುದೇ ರೋಗಿಗಳ ಮನಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನು ಒಪ್ಪದ ಸಂಸ್ಥೆ ನಿರ್ದೇಶಕರು ಈ ರೀತಿ ರೀಲ್ಸ್ ಮಾಡಿರುವ ವಿದ್ಯಾರ್ಥಿಗಳಿಗೆ ನೊಟೀಸ್ ಕೂಡ ನೀಡಿದ್ದಾರೆ. 38 ವಿದ್ಯಾರ್ಥಿಗಳನ್ನು ಅಮಾನತುಮಾಡಲಾಗಿದೆ. ಅಲ್ಲದೇ ಈಗಾಗಲೇ ಅವರ ಹೌಸ್‌ಮನ್ ಶಿಪ್ ಮುಗಿಯಬೇಕಿತ್ತು. ಇನ್ನೂ ಹತ್ತು ದಿನ ಹೆಚ್ಚುವರಿಯಾಗಿ ಸೇವೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲೂ ಇದೇ ರೀತಿ ವೈದ್ಯರು ರೀಲ್ಸ್ ಮಾಡಿದ್ದು ಭಾರೀ ಸದ್ದು ಮಾಡಿತ್ತು. ಕೆಲವರು ಕೆಲಸದ ಒತ್ತಡದಿಂದ ವೈದ್ಯರು ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದರೆ, ಮತ್ತೆ ಕೆಲವರು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು.