ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಬಂಧನ!
ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್‍ನನ್ನು (RD Patil Arrest) ಬಂಧಿಸಲಾಗಿದೆ
ಪ್ರಕರಣ ಬೆಳಕಿಗೆ ಬಂದ ಬಳಿಕ ಅಂದರೆ ಕಳೆದ 12 ದಿನಗಳಿಂದ ಆರ್‌ಡಿ ಪಾಟೀಲ್ ತಲೆಮರೆಸಿಕೊಂಡಿದ್ದನು. ತೀವ್ರ ಹುಡುಕಾಟದ ನಂತರ ಇಂದು ಪಾಟೀಲ್‌ನನ್ನು ಅರೆಸ್ಟ್ ಮಾಡಲಾಗಿದೆ.
ತಲೆಮರೆಸಿಕೊಂಡಿದ್ದ ಆರ್ ಡಿ ಪಾಟೀಲ್ ಸಂಬಮಧಿಕರ ಮನೆಯಲ್ಲಿಯೇ ಅವಿತುಕೊಂಡಿದ್ದ. ಇಂದು ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಅಫಜಲಪುರದಲ್ಲಿರುವ ಸಂಬಂಧಿಕರ ಮನೆಯಿಂದಲೇ ಆರ್ ಡಿ ಪಾಟೀಲ್‍ನನ್ನು ಬಂಧನ ಮಾಡಿದ್ದಾರೆ.
ಈ ಹಿಂದೆ ಆರ್.ಡಿ ಪಾಟೀಲ್ ನಗರದಲ್ಲೇ ಅಡಗಿಕೊಂಡು ಮೊಬೈಲ್‍ನ್ನು ಬೇರೊಬ್ಬರ ಬಳಿ ಕೊಟ್ಟು ಉತ್ತರ ಪ್ರದೇಶಕ್ಕೆ ಕಳಿಸಿದ ವಿಚಾರ ಬೆಳಕಿಗೆ ಬಂದಿತ್ತು. ಆರೋಪಿ ಕಲಬುರಗಿಯಲ್ಲೇ ಇರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದರು. ಕೂಡಲೇ ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆಗಾಗಲೇ ಆರೋಪಿ ತಪ್ಪಿಸಿಕೊಂಡಿದ್ದು, ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದನು
ಇತ್ತ ಮಹಾರಾಷ್ಟ್ರಕ್ಕೆ ಕರೆದುಕೊಂಡು ಬಿಟ್ಟ ಇಬ್ಬರು ಬಲಗೈ ಬಂಟರನ್ನು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸರು 2 ದಿನಗಳ ಹಿಂದಷ್ಟೇ ವಶಕ್ಕೆ ಪಡೆದಿದ್ದರು. ಆರೋಪಿ ರವಿ ಊಕುಲಿ ಹಾಗೂ ಮತ್ತೋರ್ವನನ್ನು ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳು ಆರ್.ಡಿ ಪಾಟೀಲ್‍ನನ್ನು ಸೋಲ್ಲಾಪುರದವರೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಮಹಾರಾಷ್ಟ್ರದಲ್ಲಿ ಹುಡುಕಾಟ ನಡೆಸುತ್ತಿದ್ದರು.