RCBvsMI ಹೈವೋಲ್ಟೇಜ್ ಕದನ – ಇಂದು ಸೋತರೆ RCB ಪ್ಲೇ ಆಫ್ ತಲುಪೋದು ಕಷ್ಟ
ಮುಂಬೈ: ಈ ಬಾರಿ ಐಪಿಎಲ್‌ನಲ್ಲಿ (IPL 2023) ಹಿಂದೆಂದಿಗಿಂತಲೂ ಪೈಪೋಟಿ ಹೆಚ್ಚಾಗಿದೆ. ಕನಿಷ್ಠ ಪ್ಲೇ ಆಫ್ ತಲುಪಲೇಬೇಕೆಂದು ಎಲ್ಲ ತಂಡಗಳೂ ಹಣಾಹಣಿ ನಡೆಸುತ್ತಿವೆ.
ಪ್ರತಿಬಾರಿಯೂ `ಈ ಸಲ ಕಪ್ ನಮ್ದೆ’ ಎಂದು ಹೇಳುತ್ತಿರುವ ಆರ್‌ಸಿಬಿ (RCB) ಈ ಬಾರಿ ಚೊಚ್ಚಲ ಕಪ್ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಪ್ಲೆ ಆಫ್ ಹಾದಿ ಸುಗಮವಾಗಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಸೆಣಸಲಿದೆ.
ಈ ಬಾರಿ ಐಪಿಎಲ್‌ನಲ್ಲಿ ತಲಾ 10 ಪಂದ್ಯಗಳನ್ನಾಡಿರುವ ಇತ್ತಂಡಗಳು ತಲಾ 10 ಅಂಕಗಳನ್ನು ಪಡೆದಿವೆ. ಆರ್‌ಸಿಬಿ 6ನೇ ಸ್ಥಾನದಲ್ಲಿದ್ದರೆ, ಮುಂಬೈ 8ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದರೂ ಅಧಿಕ ನೆಟ್‌ರನ್‌ರೇಟ್‌ನಿಂದಾಗಿ 7ನೇ ಸ್ಥಾನ ಪಡೆದುಕೊಂಡಿದೆ.
16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತವರು ಬೆಂಗಳೂರು ಚಿನ್ನಸ್ವಾಮಿ ಅಂಗಳದಲ್ಲಿ ಮುಂಬೈ ವಿರುದ್ಧ ಗೆದ್ದು ಸೀಜನ್ ಆರಂಭಿಸಿತು. ಈವರೆಗೆ ಮುಂಬೈ ಮತ್ತು ಆರ್‌ಸಿಬಿ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 17ರಲ್ಲಿ ಹಾಗೂ ಆರ್‌ಸಿಬಿ 14ರಲ್ಲಿ ಗೆಲುವು ಸಾಧಿಸಿದೆ. ಇಂದಿನ ಪಂದ್ಯ ಇತ್ತಂಡಗಳಿಗೂ ನಿರ್ಣಾಯಕವಾಗಿದ್ದು, ಗೆದ್ದ ತಂಡಕ್ಕೆ ಪ್ಲೆ ಆಫ್ ಹಾದಿ ಸುಗಮವಾಗಲಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಬ್ಯಾಟಿಂಗ್ ಸ್ನೇಹಿಯಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಕಳೆದ ಎರಡೂ ಪಂದ್ಯಗಳ 4 ಇನ್ನಿಂಗ್ಸ್‌ನಲ್ಲೂ 200ರನ್‌ಗಳ ಬೃಹತ್ ಮೊತ್ತ ದಾಖಲಾಗಿದ್ದು, ಚೇಸಿಂಗ್‌ಗೆ ಹೆಚ್ಚು ಅನುಕೂಲವಾಗಿದೆ.
ತವರಿನಲ್ಲಿ ಮುಂಬೈ ಸ್ಟ್ರಾಂಗ್:
ತವರಿನ ಸ್ಟೇಡಿಯಂಗಳಲ್ಲಿ ಮುಂಬೈ ಸ್ಟ್ರಾಂಗ್ ಆಗಿದೆ. ಅಲ್ಲದೇ ಆರಂಭದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯಕುಮಾರ್ ಯಾದವ್ ಕಳೆದ ಮೂರ್ನಾಲ್ಕು ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ. ಆದ್ರೆ ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲದ ಅಗತ್ಯವಿದೆ. ಕೆಜಿಎಫ್ (ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್) ಬಿಟ್ಟರೆ, ಉಳಿದ ಆಟಗಾರರಿಂದ ಕಳಪೆ ಪ್ರದರ್ಶನ ಕಂಡಿದೆ. ಕಳೆದ ಪಂದ್ಯದಲ್ಲಿ ಮಾತ್ರ ಮಹಿಪಾಲ್ ಲೊಮ್ರೋರ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು.