RCB LOGO: ಐಪಿಎಲ್ ಆರಂಭಕ್ಕೂ ಮುನ್ನ ಲೋಗೋ ಬದಲಿಸಿದ ಆರ್ಸಿಬಿ..!
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಮುಂಬರುವ ಐಪಿಎಲ್ಗಾಗಿ ತನ್ನ ಲೋಗೋ ವಿನ್ಯಾಸವನ್ನು ಬದಲಿಸಿದೆ. ಈ ಬದಲಾವಣೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿಕೊಂಡಿದೆ. ವಿಶೇಷ ಎಂದರೆ ಆರ್ಸಿಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ.
IPL 2008: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಈ ಲೋಗೋ ವಿನ್ಯಾಸದೊಂದಿಗೆ ಕಣಕ್ಕಿಳಿದಿತ್ತು. ಅಂದು ಆರ್ಸಿಬಿ ತನ್ನ ಲೋಗೋ ವಿನ್ಯಾಸದಲ್ಲಿ RC (ರಾಯಲ್ ಚಾಲೆಂಜರ್ಸ್) ಯನ್ನು ಎದ್ದು ಕಾಣುವಂತೆ ಚಿತ್ರಿಸಿದ್ದರು. ಅಂದರೆ ಇಲ್ಲಿ ಸಿಂಹದ ಗುರುತಿಕ್ಕಿಂತ ರಾಯಲ್ ಚಾಲೆಂಜರ್ಸ್ ಬರಹಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು.
IPL 2009-2015: ಐಪಿಎಲ್ 2009 ರಲ್ಲಿ ಆರ್ಸಿಬಿ ತಂಡವು ಲೋಗೋ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿತು. ಮೊದಲ ಸೀಸನ್ನ ಲೋಗೋವನ್ನು ಇಲ್ಲಿ ಮುಂದುವರೆಸಲಾಗಿದ್ದರೂ ಬಣ್ಣಗಳಲ್ಲಿ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಈ ಲೋಗೋದೊಂದಿಗೆ ಆರ್ಸಿಬಿ 7 ಸೀಸನ್ಗಳಲ್ಲಿ ಕಣಕ್ಕಿಳಿದಿರುವುದು ವಿಶೇಷ.
IPL 2016-2019: ಆರ್ಸಿಬಿ ತಂಡದ ಲೋಗೋದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದ್ದು 2016 ರಲ್ಲಿ. ಅಂದಿನ ಲೋಗೋದಲ್ಲಿ RC ಬದಲಿಗೆ ಸಿಂಹದ ಚಿತ್ರವನ್ನು ಹೈಲೆಟ್ ಮಾಡಲಾಗಿತ್ತು. ಈ ಲೋಗೋವನ್ನು 2019 ರವರೆಗೆ ಬಳಸಿಕೊಂಡಿತ್ತು.
IPL 2020-2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಲೋಗೋವನ್ನು ಸಂಪೂರ್ಣವಾಗಿ ಬದಲಿಸಿದ್ದು 2020 ರಲ್ಲಿ. ಈ ಬಾರಿ ಲೋಗೋದಿಂದ RC ಬರಹವನ್ನು ತೆಗೆದುಹಾಕಿದ್ದಲ್ಲದೆ, ಸಿಂಹದ ಗುರುತನ್ನು ಹೈಲೆಟ್ ಮಾಡಿತು. ಈ ಮೂಲಕ ಈ ಹಿಂದಿನ ಮೂರು ಲೋಗೋಗಿಂತ ವಿಭಿನ್ನ ವಿನ್ಯಾಸವನ್ನು ರೂಪಿಸಿತ್ತು. ಅಲ್ಲದೆ ಕಳೆದ ಸೀಸನ್ವರೆಗೆ ಆರ್ಸಿಬಿ ಇದೇ ಲೋಗೋದಲ್ಲೇ ಕಣಕ್ಕಿಳಿದಿದೆ.
IPL 2024: ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನೊಂದಿಗೆ ಕಣಕ್ಕಿಳಿಯಲಿದೆ. ಇಲ್ಲಿ ಹೆಸರಿನೊಂದಿಗೆ ಲೋಗೋ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಯಾಗಿದೆ. ಅಂದರೆ ಇದೇ ಮೊದಲ ಬಾರಿಗೆ ಆರ್ಸಿಬಿ ತನ್ನ ಲೋಗೋದಲ್ಲಿ RCB ಎಂದು ಬರೆದುಕೊಂಡಿದೆ. ಹಾಗೆಯೇ ಈ ಹಿಂದಿನ ಟ್ರೇಡ್ ಮಾರ್ಕ್ ವಿನ್ಯಾಸ ಸಿಂಹ ಘರ್ಜನೆಯನ್ನು ಇಲ್ಲೂ ಕೂಡ ಮುಂದುವರೆಸಲಾಗಿದೆ.