Ratan Tata: ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಇನ್ನಿಲ್ಲ
ಮುಂಬೈ: ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ Ratan Tata ಇಂದು ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್‌ನ ಚೇರ್ಮನ್ ರತನ್ ಟಾಟಾ (Ratan Tata) ವಿಧಿವಶರಾಗಿದ್ದು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ (Ratan Tata) ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು. ಅವಿವಾಹಿತ ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ದೇಶದ ಆಸ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಗಳಿಕೆಯನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ.
ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಹಿರಿಯ ಚೇತನಕ್ಕೆ ಅಶೃತರ್ಪಣ ಸಲ್ಲಿಸಿದ್ದಾರೆ.
ರತನ್ ನಾವಲ್ ಟಾಟಾ ( ಡಿಸೆಂಬರ್ 28, 1937)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಸ್ಥಾಪಿಸಿದ್ದರು.
ರತನ್ ಟಾಟಾ ಅವರು ಕೈಗಾರಿಕೋದ್ಯಮ, ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಗಳಿಸಿದ್ದವರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಹಳ ದಾನ ಧರ್ಮ ಉದಾರಗಳ ರತನ್ ಟಾಟಾ ನಿಜಕ್ಕೂ ಉದಾತ್ತ ವ್ಯಕ್ತಿಯಾಗಿದ್ದರು.
ದೇಶದಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿದ ನಂತರ, ರತನ್ ಟಾಟಾ ಮೊದಲು ಟಾಟಾ ಗ್ರೂಪ್ ಕಂಪನಿಯಾದ ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ ಜಮ್ಶೆಡ್‌ಪುರದ ಟಾಟಾ ಪ್ಲಾಂಟ್‌ನಲ್ಲಿ ಕೆಲವು ತಿಂಗಳು ತರಬೇತಿ ಪಡೆದರು. ತರಬೇತಿ ಮುಗಿಸಿ ರತನ್ ಟಾಟಾ ಅವರು ತಮ್ಮ ಜವಾಬ್ದಾರಿಯನ್ನು ಆರಂಭಿಸಿದರು.
Ratan Tata ನಿಧನಕ್ಕೆ ಗಣ್ಯರ ಸಂತಾಪ;
ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ದೇಶದ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು, ‘ದೂರದೃಷ್ಟಿಯ ವ್ಯಕ್ತಿ’ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದ ಐಕಾನ್ ವ್ಯಕ್ತಿ: ದ್ರೌಪದಿ ಮುರ್ಮು
ರತನ್ ಟಾಟಾ ಅವರ ನಿಧನ ಅತೀವ ದುಃಖದ ತಂದಿದ್ದು, ಭಾರತವು ಸಾಂಸ್ಥಿಕ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಮತ್ತು ಶ್ರೇಷ್ಠತೆಯನ್ನು ನೀತಿಯೊಂದಿಗೆ ಸಂಯೋಜಿಸಿದ ಐಕಾನ್ ವ್ಯಕ್ತಿಯನ್ನು ಅನ್ನು ಕಳೆದುಕೊಂಡಿದೆ. ಪದ್ಮವಿಭೂಷಣ ಮತ್ತು ಪದ್ಮಭೂಷಣ ಪುರಸ್ಕೃತರಾದ ಅವರು ಶ್ರೇಷ್ಠ ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಹೆಚ್ಚು ಪ್ರಭಾವಶಾಲಿ ಜಾಗತಿಕ ಉಪಸ್ಥಿತಿಯನ್ನು ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
ಉತ್ಸಾಹ ಮತ್ತು ಬದ್ಧತೆಯ ವ್ಯಕ್ತಿ: ಅಮಿತ್ ಶಾ
ರತನ್ ಟಾಟಾ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದು, ‘ಹಿರಿಯ ಕೈಗಾರಿಕೋದ್ಯಮಿ ಮತ್ತು ನಿಜವಾದ ರಾಷ್ಟ್ರೀಯವಾದಿ ರತನ್ ಟಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ನಿಸ್ವಾರ್ಥವಾಗಿ ನಮ್ಮ ದೇಶದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ನಾನು ಅವರನ್ನು ಭೇಟಿಯಾದಾಗಲೆಲ್ಲಾ, ಭಾರತ ಮತ್ತು ಅದರ ಜನರ ಸುಧಾರಣೆಗೆ ಅವರು ತೋರುತ್ತಿದ್ದ ಉತ್ಸಾಹ ಮತ್ತು ಬದ್ಧತೆ ನನ್ನನ್ನು ಬೆರಗುಗೊಳಿಸಿತು. ನಮ್ಮ ದೇಶ ಮತ್ತು ಅದರ ಜನರ ಕಲ್ಯಾಣಕ್ಕಾಗಿ ಅವರ ಬದ್ಧತೆ ಲಕ್ಷಾಂತರ ಕನಸುಗಳನ್ನು ಅರಳಿಸಲು ಕಾರಣವಾಯಿತು. ರತನ್ ಟಾಟಾ ಅವರನ್ನು ಅವರ ಪ್ರೀತಿಯ ರಾಷ್ಟ್ರದಿಂದ ದೂರ ಮಾಡಲು ಸಮಯದಿಂದ ಸಾಧ್ಯವಿಲ್ಲ. ಅವರು ನಮ್ಮ ಹೃದಯದಲ್ಲಿ ವಾಸಿಸುತ್ತಾರೆ. ಟಾಟಾ ಗ್ರೂಪ್ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.