Rashmika Mandanna: ಡೀಪ್ ಫೇಕ್ ಗೆ ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಟಾರ್ಗೆಟ್ ; ವಿಡಿಯೋ ವೈರಲ್
ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಡೀಪ್ಫೇಕ್ ವಿಡಿಯೋದಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಯಾರದ್ದೋ ದೇಹಕ್ಕೆ ನಟಿಯರ ಮುಖವನ್ನು ಎಡಿಟ್ ಮಾಡುವ ಕೆಲಸ ಆಗುತ್ತಿದೆ. ಇದರಿಂದ ಸಾಕಷ್ಟು ಮಂದಿಗೆ ತೊಂದರೆ ಆಗುತ್ತಿದೆ. ನಟಿಯರನ್ನು ಅಶ್ಲೀಲವಾಗಿ ಬಿಂಬಿಸುವ ಕೆಲಸ ಆಗುತ್ತಿದೆ. ಈ ರೀತಿ ಆಗಬಾರದು ಎಂದು ಸರ್ಕಾರ ಕೂಡ ಕ್ರಮಕೈಗೊಳ್ಳುತ್ತಿದೆ. ಆದರೆ, ಯಾವುದೇ ಪ್ರಯೋಜನ ಆಗುತ್ತಿಲ್ಲ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮತ್ತೊಂದು ಡೀಪ್ಫೇಕ್ ವಿಡಿಯೋ ವೈರಲ್ ಆಗಿದೆ.
ಡೀಪ್ಫೇಕ್ ವಿಡಿಯೋ ಬಗ್ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮಾಡಲಾದ ಫೇಕ್ ವಿಡಿಯೋದಿಂದ. ಯುವತಿಯೊಬ್ಬರು ಸಣ್ಣ ಬಟ್ಟೆ ಧರಿಸಿ ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಲಾಯಿತು. ಅನೇಕರು ಇದು ರಶ್ಮಿಕಾ ಎಂದೇ ಭಾವಿಸಿದ್ದರು. ಜೊತೆಗೆ ಬಟ್ಟೆ ಬಗ್ಗೆ ಅವರಿಗೆ ಪಾಠ ಹೇಳಿದರು. ಇದನ್ನು ಗಮನಿಸಿದ ಕೆಲವರು ಇದು ಡೀಪ್ಫೇಕ್ ವಿಡಿಯೋ ಎಂದು ಎಚ್ಚರಿಸಿದರು.
ನಂತರ ಅಮಿತಾಭ್ ಬಚ್ಚನ್ ಸೇರಿ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಧ್ವನಿ ಎತ್ತಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತಪ್ಪಿತಸ್ಥನ ಅರೆಸ್ಟ್ ಮಾಡಿದ್ದರು. ಆದರೂ ಜನರಲ್ಲಿ ಭಯ ಮೂಡಿಲ್ಲ. ಈಗ ರಶ್ಮಿಕಾ ಅವರ ಹೊಸ ಡೀಪ್ಫೇಕ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಯುವತಿಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಮುಖ ಹಾಕಲಾಗಿದೆ. ಈ ವಿಡಿಯೋಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಮಾಡಬೇಡಿ’ ಎಂದು ಅವರ ಫ್ಯಾನ್ಸ್ ಕೋರಿಕೊಂಡಿದ್ದಾರೆ. ಕೆಲವರು ಪೊಲೀಸರ ಬಳಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಬಳಗ ದೊಡ್ಡದಿದೆ. ಸದ್ಯ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಇದರ ಜೊತೆಗೆ ಇನ್ನೂ ಕೆಲವು ಪ್ರಮುಖ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.