ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ವೈರಲ್ ; ವಿಡಿಯೋದ ಅಸಲಿ ಝರಾ ಪಟೇಲ್ ಟ್ವೀಟ್..!
ಮುಂಬೈ: ಕನ್ನಡ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ಫೇಕ್ ವಿಡಿಯೊ (Deepfake video) ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ (Zara Patel) ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು. ಇದೀಗ ಝರಾ ಪಟೇಲ್ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ಡೀಪ್ಫೇಕ್ ವಿಡಿಯೊದಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೊವನ್ನು ಝರಾ ಪೋಸ್ಟ್ ಮಾಡಿದ್ದರು. ಅದಕ್ಕೆ ರಶ್ಮಿಕಾ ಮುಖವನ್ನು ಎಡಿಟ್ ಮಾಡಲಾಗಿದೆ.
ಝರಾ ಪಟೇಲ್ ಹೇಳಿದ್ದೇನು?
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ತಮ್ಮ ನೋವನ್ನು ಹೊರ ಹಾಕಿದ್ದಾರೆ. ʼʼಹಾಯ್, ನನ್ನ ಶರೀರಕ್ಕೆ ಜನಪ್ರಿಯ ನಟಿಯ ಮುಖ ಎಡಿಟ್ ಮಾಡಿದ ಡೀಪ್ಫೇಕ್ ವಿಡಿಯೊ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ರೀತಿ ನಡೆದಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ಚಿಂತೆ ಕಾಡತೊಡಗಿದೆ. ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಇನ್ನೂ ಹೆಚ್ಚು ಭಯಪಡುವಂತಗಿದೆ. ದಯವಿಟ್ಟು ಯಾವುದೇ ವಿಡಿಯೊ, ಫೋಟೊ ನೋಡುವ ಮುನ್ನ, ಶೇರ್ ಮಾಡುವ ಮೊದಲು ಅದರ ನಿಜಾಂಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅಂತರ್ಜಾಲದಲ್ಲಿ ಎಲ್ಲವೂ ನಿಜವಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
From a deepfake POV, the viral video is perfect enough for ordinary social media users to fall for it. But if you watch the video carefully, you can see at (0:01) that when Rashmika (deepfake) was entering the lift, suddenly her face changes from the other girl to Rashmika. (3/3)
— Abhishek (@AbhishekSay) November 5, 2023
ಸೋಮವಾರ (ನವೆಂಬರ್ 6) ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ರಶ್ಮಿಕಾ ಅವರ ಡೀಪ್ಫೇಕ್ ವಿಡಿಯೊ ಬಗ್ಗೆ ಎಲ್ಲರ ಗಮನ ಸೆಳೆದಿದ್ದರು. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಕರೆ ನೀಡಿದ್ದರು. ಬಳಿಕ ರಶ್ಮಿಕಾ ಕೂಡ ಈ ಬಗ್ಗೆ ಬರೆದುಕೊಂಡಿದ್ದರು. “ಇದನ್ನು ಹಂಚಿಕೊಳ್ಳಲು ನನಗೆ ನಿಜವಾಗಿಯೂ ನೋವಾಗಿದೆ ಮತ್ತು ನನ್ನ ಡೀಪ್ಫೇಕ್ ವಿಡಿಯೊವನ್ನು ಆನ್ಲೈನ್ನಲ್ಲಿ ಹರಡುತ್ತಿರುವ ಬಗ್ಗೆ ಮಾತನಾಡಬೇಕಾಗಿದೆ. ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ವಿಷಯವೇ ಚಿಂತೆಗೀಡು ಮಾಡುತ್ತಿದೆ. ಇಂದು ಒಬ್ಬ ಮಹಿಳೆಯಾಗಿ ಮತ್ತು ನಟಿಯಾಗಿ ನನ್ನ ರಕ್ಷಣೆ ಮತ್ತು ಬೆಂಬಲಕ್ಕೆ ನಿಂತಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇದು ಸಂಭವಿಸಿದ್ದರೆ ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎನ್ನುವುದನ್ನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ. ಹೆಚ್ಚಿನ ಜನರು ತೊಂದರೆಗೆ ಒಳಗಾಗುವುದಕ್ಕೂ ಮುನ್ನವೇ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
ಕೇಂದ್ರ ಸಚಿವರಿಂದಲೂ ವಿರೋಧ
ವೈರಲ್ ಆಗುತ್ತಿರುವ ರಶ್ಮಿಕಾ ಅವರ ಡೀಪ್ಫೇಕ್ ವಿಡಿಯೊ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಪ್ರತಿಕ್ರಿಯಿಸಿದ್ದರು. ʼʼಇಂಥ ಅಪಾಯಕಾರಿ ಮತ್ತು ಹಾನಿಕಾರಕ ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಎದುರಿಸಬೇಕಾಗಿದೆʼʼ ಎಂದು ಅವರು ಹೇಳಿದ್ದರು. ಜತೆಗೆ ರಶ್ಮಿಕಾ ಅವರ ಅಭಿಮಾನಿಗಳೂ ನಟಿಯ ಬೆಂಬಲಕ್ಕೆ ನಿಂತಿದ್ದಾರೆ.
ಡೀಪ್ಫೇಕ್ ಅಂದರೇನು?
‘ಡೀಪ್ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್ಫೇಕ್ ವೀಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್ ಆಗಿ ಕಾಣುವಂತೆ ಮಾಡಲಾಗುತ್ತದೆ.